ರಾಯಚೂರು | ಭತ್ತ ಕಟಾವು ಯಂತ್ರಕ್ಕೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲಿ : ಕ್ರಮಕ್ಕೆ ಸಿಪಿಐಎಂಎಲ್ ಲಿಬರೇಶನ್ ಒತ್ತಾಯ

ರಾಯಚೂರು : ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2,450ರೂ. ಬಾಡಿಗೆ ನಿಗದಿಪಡಿಸಿ ಇಷ್ಟೇ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಸಿಂಧನೂರು ತಹಶೀಲ್ದಾರರಿಗೆ ಸಿಪಿಐಎಂಎಲ್ ಲಿಬರೇಶನ್ ಪಾರ್ಟಿಯ ನೇತೃತ್ವದಲ್ಲಿ ಗಂಜಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಭತ್ತ ಕಟಾವು ಯಂಕತ್ರಕ್ಕೆ ಪ್ರತಿ ಗಂಟೆಗೆ ಗರಿಷ್ಠ 2,450 ರೂ. ನಿಗದಿಪಡಿಸಿದ್ದು, ಗಂಜಳ್ಳಿ ಗ್ರಾಮದಲ್ಲಿ ಭತ್ತ ಕಾವು ಯಂತ್ರಗಳ ದರವನ್ನು ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಪ್ರತಿ ಗಂಟೆಗೆ 3,000 ರೂ. ಬಾಡಿಗೆಯನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ರೈತರು ಪ್ರಶ್ನೆ ಮಾಡಿದರೆ ಹಾರಿಕೆಯ ಉತ್ತರ ನೀಡಲಾಗುತ್ತಿದೆ ಎಂದು ದೂರಿದರು.
ಲಕ್ಷಾಂತರ ರೂ. ಖರ್ಚು ಮಾಡಿ ಭತ್ತದ ಬೆಳೆ ಬೆಳೆದಿದ್ದು, ಈಗ ಭತ್ತ ಕಟಾವಿಗೆ ಹೆಚ್ಚಿನ ದರ ಪಡೆಯುತ್ತಿರುವುದರಿಂದ ಸಮಸ್ಯೆಯಾಗಿದೆ. ತಕ್ಷಣವೇ ಹೆಚ್ಚಿನ ದರ ಪಡೆಯುತ್ತಿರುವ ಯಂತ್ರಗಳ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೇವರಾಜ, ತಿಮ್ಮನಗೌಡ, ಅಮರೇಶ ಹೊಕ್ರಾಣಿ, ರಾಜಾಸಾಬ್, ಅಮರೇಶ ಸಜ್ಜನ್, ರಾಘವೇಂದ್ರ, ಶರಣಪ್ಪ, ಹನುಮಂತ, ಶಂಕರಗೌಡ, ನಾಗರಾಜ ಇತರರು ಇದ್ದರು.







