ರಾಯಚೂರು | ಸಾರ್ವಜನಿಕ ಶಾಂತಿ ಭಂಗ ಆರೋಪ : ಸಹಾಯಕ ಆಯುಕ್ತರಿಂದ 5 ಜನರ ಗಡಿಪಾರು ಆದೇಶ

ರಾಯಚೂರು: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದೊಂಬಿ, ಕೊಲೆ ಪ್ರಕರಣದ ಅಪರಾಧಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡಿ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ 5 ಜನರನ್ನು ಗಡಿಪಾರು ಮಾಡಿ ಸಹಾಯಕ ಆಯುಕ್ತ ಗಜಾನನ ಬಾಳೆ ಆದೇಶ ಹೊರಡಿಸಿದ್ದಾರೆ.
4 ಜನರನ್ನು ವಿಜಯಪುರ ಜಿಲ್ಲೆಗೆ ಮತ್ತು ಓರ್ವ ವ್ಯಕ್ತಿಯನ್ನು ವಿಜಯನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ತಾಲೂಕಿನ ಮಿರ್ಜಾಪೂರ ಗ್ರಾಮದ 5 ಜನರನ್ನು ಕಲಂ 55 ಕೆಪಿ ಕಾಯ್ದೆಯಡಿಯಲ್ಲಿ ಗಡಿಪಾರು ಮಾಡಲಾಗಿದೆ. ಮಿರ್ಜಾಪೂರ ಗ್ರಾಮದ ಮಲದಕಲ್ ಮಲ್ಲಿಕಾರ್ಜುನನನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ಪೋಲಿಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಅರೋಲಿ ಭೀಮಣ್ಣ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಡಿ ಗಡಿಪಾರು ಮಾಡಲಾಗಿದೆ. ಗೋರೆಪ್ಪನನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೋರ್ತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಗಡಿಪಾರು ಮಾಡಲಾಗಿದೆ. ತಾಯಪ್ಪನನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಪೋಲಿಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಆಲಾದಿನನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪೋಲಿಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. 06-11-2025 ರಿಂದ ನ.06-01-2026ರವರೆಗೆ ಗಡಿಪಾರು ಮಾಡಿದ್ದು, ಆಯಾ ಪೋಲಿಸ್ ಠಾಣೆಗೆ ಹಾಜರಾಗಿದ್ದ ವರದಿಯನ್ನು ಸಲ್ಲಿಸುವಂತೆ ಠಾಣಾಧಿಕಾರಿಗೆ ತಿಳಿಸಿದ್ದಾರೆ.
ಗಡಿಪಾರು ಅವಧಿಯಲ್ಲಿ ಗಡಿಪಾರು ಮಾಡಲಾಗಿದ್ದ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿಗಾವಹಿಸಿ ಗಡಿಪಾರು ಆದೇಶವನ್ನು ಉಲ್ಲಂಘಿಸಿ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವೇಶ ಮಾಡಿದಲ್ಲಿ ಅವರುಗಳ ಮೇಲೆ ಸೂಕ್ತ ಕ್ರಮ ಕ್ರಮ ಜರುಗಿಸಲು ಹಾಗೂ ಆರೋಪಿಗಳು ಪ್ರತಿವಾರ ಆಯಾ ಪೊಲೀಸ್ ಠಾಣೆಗೆ ಹೋಗಿ ಹಾಜರಿ ನೀಡುವಂತೆ ಸೂಚಿಸಿದ್ದಾರೆ.







