ರಾಯಚೂರು | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ನಾಗರಿಕರು ಸಹಕರಿಸಬೇಕು : ಅಪರ ಜಿಲ್ಲಾಧಿಕಾರಿ ಶಿವಾನಂದ

ಸಾಂದರ್ಭಿಕ ಚಿತ್ರ
ರಾಯಚೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2025 ಜಾಗೃತಿ ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರಿಕರೂ ಭಾಗಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಮನವಿ ಮಾಡಿದ್ದಾರೆ.
ಸಮೀಕ್ಷೆಯ ಉದ್ದೇಶವು ರಾಜ್ಯದ ಎಲ್ಲಾ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಸಮಗ್ರ ಅಂಕಿಅಂಶ ಸಂಗ್ರಹಿಸಿ, ಹಿಂದುಳಿದ ಅಥವಾ ದುರ್ಬಲ ವರ್ಗಗಳನ್ನು ಗುರುತಿಸಿ ಅವರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುವುದಾಗಿದೆ.
ಸೆಪ್ಟೆಂಬರ್ 22ರಿಂದ ನವೆಂಬರ್ 7ರವರೆಗೆ ಗಣಿತಿದಾರರು ಮನೆಮನೆಗೆ ಭೇಟಿ ನೀಡಿ ಸುಮಾರು 60 ಪ್ರಶ್ನೆಗಳ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿಕಲಚೇತನ ಯುಡಿಐಡಿ ಕಾರ್ಡ್ ದೃಢೀಕರಣಕ್ಕಾಗಿ ಅಗತ್ಯವಾಗಲಿದೆ.
ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಪ್ರತಿಯೊಬ್ಬ ಸದಸ್ಯರ ಆಧಾರ್ ಮೊಬೈಲ್ ನಂಬರ್ಗೆ ಲಿಂಕ್ ಆಗಿರಬೇಕು. OTP ಮೂಲಕ ಇ-ಕೆವೈಸಿ ಪ್ರಕ್ರಿಯೆ ನಡೆಯಲಿದೆ. ಮೊಬೈಲ್ ನಂಬರ್ ಲಿಂಕ್ ಆಗಿರದಿದ್ದರೆ ತಕ್ಷಣವೇ ನವೀಕರಣ ಮಾಡಿಸಿಕೊಳ್ಳಬೇಕು.
ಜಿಲ್ಲೆಯಲ್ಲಿ 4,75,000 ಕುಟುಂಬಗಳ ಸಮೀಕ್ಷೆಗೆ 3178 ಗಣಿತಿದಾರರು, 340 ಮೇಲ್ವಿಚಾರಕರು ಹಾಗೂ 68 ಮಾಸ್ಟರ್ ಟ್ರೈನರ್ಸ್ ನಿಯೋಜಿಸಲಾಗಿದೆ. ತಾಲೂಕು ಮಟ್ಟದಲ್ಲಿ ವಾರ್ ರೂಮ್ ಸ್ಥಾಪಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಅಥವಾ kscbc.karnataka.gov.in ಜಾಲತಾಣವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







