ರಾಯಚೂರು | ವೈಟಿಪಿಎಸ್ ವಿದ್ಯುತ್ ಘಟಕದ ಕಲ್ಲಿದ್ದಲು ಕಳ್ಳ ಸಾಗಾಣಿಕೆ : ಶಿವಕುಮಾರ ಆರೋಪ

ರಾಯಚೂರು : ವೈಟಿಪಿಎಸ್ ವಿದ್ಯುತ್ ಘಟಕಕ್ಕೆ ಸಂಬಂಧಿಸಿದ ಕಲ್ಲಿದ್ದಲನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿದ್ದು, ಇದರಿಂದ ಸರಕಾರಕ್ಕೆ ಕೋಟ್ಯಾಂತರ ರೂ. ನಷ್ಟ ಉಂಟಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ನಷ್ಟವಾದ ನೂರಾರು ಕೋಟಿ ರೂ. ವಸೂಲಿ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಶಿವಕುಮಾರ ಯಾದವ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವೈಟಿಪಿಎಸ್ ಇಲಾಖೆಯ ಕೆಲವು ಅಧಿಕಾರಿಗಳು, ಉಪ ಗುತ್ತಿಗೆ ಪಡೆದಿರುವ ಪವರ್ಮ್ಯಾಕ್ ಕಂಪನಿಯ ಕೆಲ ಸಿಬ್ಬಂದಿಗಳು, ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಆಂಧ್ರ ಮೂಲದ ಕಲ್ಲಿದ್ದಲು ಕ್ಲೀನಿಂಗ್ ಕಾಮಗಾರಿ ಪಡೆದಿರುವ ಗುತ್ತಿಗೆದಾರರು ಸೇರಿಕೊಂಡು ಪ್ರತಿನಿತ್ಯ ನೂರಾರು ಟನ್‌ಗಳಷ್ಟು ಕಲ್ಲಿದ್ದಲನ್ನು ಕಳ್ಳಸಾಗಾಣಿಕೆ ಮಾಡಿ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಕೋಟ್ಯಾಂತರ ರೂ. ನಷ್ಟವನ್ನುಂಟು ಮಾಡಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ನಷ್ಟವಾದ ನೂರಾರು ಕೋಟಿ ರೂ. ಗಳನ್ನು ವಸೂಲಿ ಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರದ ಹಣ ದುರ್ಬಳಕೆ ಮಾಡಿ, ಸರಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡುತ್ತಿರುವ ಹಾಗೂ ತೆರಿಗೆ ವಂಚನೆ ಮಾಡಿ ಇನ್ನಿತರ ಅಕ್ರಮ ಆರ್ಥಿಕ ಅವ್ಯವಹರಾದಂತಹ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ವೈಟಿಪಿಎಸ್ ಅಧಿಕಾರಿಗಳಾದ ಹರೀಶ್ ಪುಂಡಿ ಇ.ಇ., ಚಂದ್ರಶೇಖರ್ ಶೆಟ್ಟಿ ಎಸ್.ಇ., ಉಪಗುತ್ತಿಗೆ ಪಡೆದ ಪವರ್‌ಮ್ಯಾಕ್ ಸೂಪರ್ವೈಸರ್ ಶ ಹರಿಕೃಷ್ಣ, ಸುರೇಂದ್ರನಾಥ್ ಕೆ.ಮ್ಯಾನೇಜರ್, ಯರಮರಸ್ ರೈಲ್ವೆ ನಿಲ್ದಾಣದ ಅಧಿಕಾರಿ ಸರಕಾರ್, ಸ್ಟೇಷನ್ ಮಾಸ್ಟರ್ ಮತ್ತು ರೈಲ್ವೆ ನಿಲ್ದಾಣದ ವ್ಯಾಗಿನ್ ಕ್ಲೀನಿಂಗ್ ಗುತ್ತಿಗೆದಾರ ಶೇಷಗಿರಿ ರಾವ್, ಮಾಲಕರು ಶ್ರೀ ಗುರು ರಾಘವೇಂದ್ರ ಎಂಟರ್‌ಪ್ರೈಸಸ್ ಇವರುಗಳು ಪ್ರತಿನಿತ್ಯ ಟನ್ ಗಟ್ಟಲೆ ಕಲ್ಲಿದ್ದಲನ್ನು ಖಾಸಗಿ ಲಿಕ್ಕರ್ ಕಂಪನಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂಧರ್ಭದಲ್ಲಿ ಕರುಣಾಕರ್ ರೆಡ್ಡಿ ಗುಂಜಹಳ್ಳಿ, ಟಿ. ವಿಶಾಲ್ ಕುಮಾರ್, ಸೈಯದ್ ಕೈಸರ್ ಹುಸೇನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







