ರಾಯಚೂರು| ನಗರಕ್ಕೆ ಮೂಲಸೌಕರ್ಯ ಒದಗಿಸಲು ಶಾಸಕರ ಜೊತೆ ಆಯುಕ್ತರು ಚರ್ಚೆ
ರಾಯಚೂರು: ನಗರದಲ್ಲಿ ಇರುವ ಸಮಸ್ಯೆಗಳ ಕುರಿತು ಮತ್ತು ನಗರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಸಭೆ ನಡೆಸಿ ಚರ್ಚಿಸಿದರು.
ಮುಖ್ಯವಾಗಿ ನಗರದಲ್ಲಿ ಖಾತಾ ನೀಡುವಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ನಗರದ ವಿವಿಧ ವಾರ್ಡ್‍ಗಳಲ್ಲಿ ಪಾಲಿಕೆಯಿಂದ ಕಂದಾಯ ಅದಾಲತ್ ನಡೆಸಲಾಗುತ್ತಿದ್ದು, ಆದರೆ ಖಾತಾ ನೀಡುವಲ್ಲಿ ತಾಂತ್ರಿಕ ಸಮಸ್ಯೆಗಳ ಎದುರಾಗುತ್ತಿದ್ದು, ತೆರಿಗೆ ಬಾಕಿ ಬಿಟ್ಟು ಇನ್ನಿತರ ಪಾಲಿಕೆಯ ವ್ಯಾಪ್ತಿಯ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಶಿವರಾಜ ಪಾಟೀಲ್ ತಿಳಿಸಿದ್ದಾರೆ.
ಇದೀಗ ಕೆರೆ ಪ್ರದೇಶ, ಕೋಟೆ ಪ್ರದೇಶದಲ್ಲಿ ವಾಸಿಸುವ ಜನರು ತೆರಿಗೆ ಪಾವತಿ ಮಾಡುತ್ತಾ ಬಂದಿದ್ದು, ಅಂತಹ ಜನರಿಗೆ ಹೊಸದಾಗಿ ಕಟ್ಟಡ ಪರವಾನಿಗೆ ನೀಡಬಾರದು ಆದರೆ ಖಾತಾ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಜುಬಿನ್ ಮಹೋಪಾತ್ರ ಮಾತನಾಡಿ, ಜನರಲ್ಲಿ ಅವರ ನಿವೇಶನ ಅಥವಾ ಆಸ್ತಿಗಳ ಹಳೆಯ ನೊಂದಾಯಿತ ದಾಖಲೆಗಳಿದ್ದರೆ ಖಾತಾ ನೀಡಲು ಯಾವುದೇ ತೊಂದರೆಯಿಲ್ಲ. ಇದಲ್ಲದೇ ಮೈಸೂರು ಮಹಾನಗರ ಪಾಲಿಕೆ ಹಾಗೂ ರಾಯಚೂರು ಮಹಾನಗರ ಪಾಲಿಕೆ ಸ್ವಚ್ಛ ಶಹರ್ ಜೋಡೋ ಒಪ್ಪಂದ ಮಾಡಿಕೊಂಡು, ನಗರದಲ್ಲಿ ಸ್ವಚ್ಛತೆ ನಿರ್ವಹಣೆಗೆ ಮೈಸೂರು ಮಹಾನಗರ ಪಾಲಿಕೆಯಿಂದ ಸಹಕಾರ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಸಭೆಯ ನಂತರ ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಡಾ.ಶಿವರಾಜ ಪಾಟೀಲ್, ಆಯುಕ್ತರ ಬಳಿ ನಗರದ ಹಲವು ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಮುಖ್ಯವಾಗಿ ಕಂದಾಯ ಅದಾಲತ್ ವಾರ್ಡ್‍ಗಳಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಆಯುಕ್ತರು ನೀಡಿದ್ದಾರೆ.
ಕಂದಾಯ ಅದಾಲತ್ ಸಮಯದಲ್ಲಿ ಅಧಿಕಾರಿಗಳು ತಮ್ಮ ಮನೆಗೆ ಬಂದಾಗ ಅವರ ಬಳಿ ಮಹಾನಗರ ಪಾಲಿಕೆಯ ಯಾವುದೇ ಸಮಸ್ಯೆಯಿದ್ದರೂ ತಿಳಿಸಬೇಕು. ಎಲ್ಲಾ ವಾರ್ಡುಗಳಲ್ಲಿ ಕಂದಾಯ ಅದಾಲತ್ ಮುಗಿದ ನಂತರ ಆಯುಕ್ತರೊಂದಿಗೆ ಅವುಗಳನ್ನು ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ನೀಡಲು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಕೋಟೆ ಪ್ರದೇಶದಲ್ಲಿ 200 ಮೀಟರ್ ಅಂತರದ ವ್ಯಾಪ್ತಿಯಲ್ಲಿರುವ
ಕಟ್ಟಡಗಳನ್ನು ಒಡೆಯಲು ಇದ್ದ ನಿಯಮ ಹಾಗೂ ಕೋಟೆ ಎತ್ತರಕ್ಕಿಂತ ಹೆಚ್ಚಿನ ಎತ್ತರದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಬಾರದೆಂಬ ನಿಯಮವನ್ನು ಸಡಿಲಿಕೆ ಮಾಡಲು ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಒಪ್ಪಿಗೆ ನಿಡಿದ್ದು, ಸಿಯಾತಲಾಬ್ ಬಡಾವಣೆಯಲ್ಲಿ ನೀಡಲಾದ ಹಕ್ಕುಪತ್ರಗಳಿಗೆ ಖಾತಾ ನೀಡುವ ವಿಷಯದ ಕುರಿತೂ ಕೂಡ ಚರ್ಚಿಸಲಾಗಿದ್ದು, ಅವುಗಳಿಗೆ ಖಾತಾ ನೀಡಲು ಸಹ ಆಯುಕ್ತರು ಭರವಸೆಯನ್ನು ನೀಡಿದ್ದಾರೆ. ಸ್ವಚ್ಛತೆಗೆ ಸಂಬಂಧಿಸಿದಂತೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಮುಖ್ಯರಸ್ತೆಗಳಲ್ಲಿ ಬೀದಿ ದೀಪಗಳನ್ನು ವಾರದೊಳಗೆ ಅಳವಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರವೀಂದ್ರ ಜಲ್ದಾರ್, ವೈ.ಗೋಪಾಲರೆಡ್ಡಿ, ಕಡಗೋಲ ಆಂಜನೇಯ್ಯ, ಇ.ಶಶಿರಾಜ, ಎನ್.ಕೆ.ನಾಗರಾಜ, ನರಸಪ್ಪ ಯಕ್ಲಾಸಪೂರ, ಭೀಮರೆಡ್ಡಿ, ಎಸ್.ಸಂಜೀವರೆಡ್ಡಿ ಸೇರಿದಂತೆ ಅನೇಕರಿದ್ದರು.







