ರಾಯಚೂರು | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಅ.7ರವರೆಗೆ ಯುದ್ಧೋಪಾದಿಯಲ್ಲಿ ನಡೆಸಿ : ಡಿಸಿ ನಿತೀಶ್ ಕೆ.

ರಾಯಚೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಆರಂಭಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷಾ ಕಾರ್ಯವು ಅ.7ರವರೆಗೆ ಯುದ್ಧೋಪಾದಿಯಲ್ಲಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸೆ.26ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯುತ್ತಿದ್ದು, ರಾಯಚೂರಿನಲ್ಲಿ ಸಹ ಅಚ್ಚುಕಟ್ಟಾಗಿ ಪೂರ್ಣಗೊಳ್ಳುವಂತೆ ಅಧಿಕಾರಿಗಳು ತಂಡಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 3,178 ಗಣತಿದಾರರು ಮತ್ತು 340 ಮೇಲ್ವಿಚಾರಕರು ನಿಯೋಜಿತರಾಗಿದ್ದು, ಶಿಕ್ಷಕರು ಗಣತಿದಾರರಾಗಿ ಹಾಗೂ ಶಿಕ್ಷಣ ಇಲಾಖೆಯ ಸಿಆರ್‌ಪಿಗಳು ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಯಟ್ ಮತ್ತು ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಮಾಸ್ಟರ್ ಟ್ರೇನರ್‌ಗಳಾಗಿ ನೇಮಕಗೊಂಡಿದ್ದಾರೆ. ತಹಶೀಲ್ದಾರ್ ಕಚೇರಿಗಳಲ್ಲಿ ವಾರ್‌ರೂಮ್‌ಗಳನ್ನು ತೆರೆಯಲಾಗಿದ್ದು, ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ.
ಗಣತಿದಾರರು ಮನೆಮನೆಗೆ ತೆರಳಿ ಕುಟುಂಬದ ಅಂಕಿಅಂಶಗಳನ್ನು ಶಿಸ್ತಿನಿಂದ ಸಂಗ್ರಹಿಸಬೇಕು. ಮೇಲ್ವಿಚಾರಕರು ಪ್ರತಿ ಗಂಟೆಗೊಮ್ಮೆ ಪರಿಶೀಲನೆ ನಡೆಸಿ, ಗಣತಿದಾರರು ಬೆಳಗ್ಗಿನಿಂದಲೇ ಕಾರ್ಯ ನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮಾಸ್ಟರ್ ಟ್ರೇನರ್‌ಗಳು ಅ.7ರವರೆಗೆ ತಾಲೂಕು ಕೇಂದ್ರದಲ್ಲೇ ಇದ್ದು ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದು ಮಾತನಾಡಿ, ಸಮೀಕ್ಷಾ ಕಾರ್ಯದಲ್ಲಿ ಗೊಂದಲ ಕಂಡುಬಂದರೆ ತಕ್ಷಣ ಮೇಲಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಜಿಂಗಲ್ಸ್ ಮೂಲಕ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತರು ಗಜಾನನ ಬಾಳೆ, ಬಸವಣೆಪ್ಪ ಕಲಶೆಟ್ಟಿ, ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಾಸ್ಟರ್ ಟ್ರೇನರ್‌ಗಳು ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.







