ರಾಯಚೂರು | ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ಅಲಿ ಅಲ್ ಹುಸೇನಿ ಅವರಿಗೆ ಅಭಿನಂದನಾ ಸಮಾರಂಭ

ರಾಯಚೂರು: ವಕ್ಫ್ ಬೋರ್ಡ್ ಮುಸ್ಲಿಂ ಸಮುದಾಯದ ಸೇವೆಗಾಗಿ ಇರುವ ಸಂಸ್ಥೆ. ನನ್ನ ಮೇಲೆ ನಂಬಿಕೆ ಇಟ್ಟು ಸಮುದಾಯದ ಸೇವೆ ಮಾಡಲು ರಾಜ್ಯ ಸರಕಾರ ಅವಕಾಶ ನೀಡಿದೆ. ಜನರ ಒಳಿತಿಗಾಗಿ ಕೆಲಸ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ಅಲಿ ಅಲ್ ಹುಸೇನಿ ಹೇಳಿದರು.
ರಾಯಚೂರಿನ ಮುಸ್ಲಿಂ ಸಮಾಜ, ಧರ್ಮಗುರುಗಳ ನೇತೃತ್ವದಲ್ಲಿ ನಗರದ ವಾಲ್ಕಟ್ ಮೈದಾನದಲ್ಲಿ ಶನಿವಾರ ರಾತ್ರಿ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ಅಲಿ ಅಲ್ ಹುಸೇನಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈಯದ್ ಅಲಿ ಅಲ್ ಹುಸೇನಿ, ನನ್ನನ್ನು ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಎಲ್ಲರಿಗೆ ಚಿರ ಋಣಿ. ದೇವರು ಎಲ್ಲಾ ಮಾನವರನ್ನು ಒಂದೇ ರೀತಿಯಾಗಿ ಸೃಷ್ಠಿ ಮಾಡಿದ್ದಾನೆ. ಮಾನವೀಯ ಮೌಲ್ಯ, ಸಕಾರಾತ್ಮಕ ಚಿಂತನೆ ಮೂಲಕ ಒಳ್ಳೆಯ ಕಾರ್ಯ ಮಾಡಬೇಕು. ಹಿರಿಯರು, ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಡೆದು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಣ್ಣ ನೀರಾವರಿ ಸಚಿವ ಎನ್ ಎಸ್ ಭೋಸರಾಜು ಮಾತನಾಡಿ, ಕಲಬುರ್ಗಿಯ ಖಾಜಾ ಬಂದೇನವಾಜ ದರ್ಗಾಕ್ಕೆ ಕೋಟ್ಯಾಂತರ ಜನರು ಬರುತ್ತಾರೆ. ದೇಶದ ಏಕತೆ, ಭಿನ್ನ ಸಂಸ್ಕೃತಿ, ಸಹೋದರತ್ವ ಕಾಪಾಡಿಕೊಂಡು ಸೂಫಿ ಸಂತರ ಸಂಸ್ಕೃತಿಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಖಾಜಾ ಬಂದೆನವಾಜ್ ದರ್ಗಾದ ಪೀಠಾಧಿಪತಿ ಆಗಿರುವ ಸೈಯದ್ ಅಲಿ ಅಲ್ ಹುಸೇನಿ ಅವರನ್ನು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಸಂತಸದ ವಿಷಯ. ದೇಶದಲ್ಲಿ ಧರ್ಮಾಧಾರಿತವಾಗಿ ವಿಷ ಬೀಜ ಬಿತ್ತಲಾಗುತ್ತಿದೆ. ಜನರನ್ನು ವಿಭಜಿಸುವ ಕೆಲಸ ಎಂದಿಗೂ ಫಲಿಸುವುದಿಲ್ಲ. ದೇಶದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ಅವಕಾಶ ನೀಡಿದೆ. ನಾವೆಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.
ಈ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಹೈದರಾಬಾದ್ ನ ಮಾಜಿ ಸಂಸದ ಮುಹಮ್ಮದ್ ಅಝರುದ್ದೀನ್ ಮಾತನಾಡಿ, ಮುಸ್ಲಿಮರೆಲ್ಲರೂ ಒಗ್ಗಟ್ಟಾಗಿರಬೇಕು. ಕೇಂದ್ರ ಸರಕಾರ ಕೃಷಿ ತಿದ್ದುಪಡಿ ಕಾಯ್ದೆ ಜಾರಿ ಮಾಡುವಾಗ ದೇಶದ ರೈತರು ಒಗ್ಗಟ್ಟಿನಿಂದ ಸುದೀರ್ಘವಾದ ಹೋರಾಟ ಮಾಡಿದ್ದರಿಂದ ಸರಕಾರ ಕಾಯ್ದೆಯನ್ನು ಹಿಂಪಡೆದಿದೆ. ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ದ ಇಂತಹ ಹೋರಾಟ ನಡೆದಿದ್ದರೆ ಸಂಸತ್ತಿನಲ್ಲಿ ಕಾಯ್ದೆ ಜಾರಿಯಾಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸದ ಜಿ.ಕುಮಾರನಾಯಕ ಮಾತನಾಡಿ, ಈ ದೇಶಕ್ಕೆ ಮುಸ್ಲಿಮರ ಕೊಡುಗೆ ಅಪಾರವಾಗಿದೆ. ಭಾರತದ ಕ್ರಿಕೆಟ್ ತಂಡದ ನಾಯಕನಾಗಿ ಮಹಮ್ಮದ್ ಅಝರುದ್ದೀನ್ ಗುರುತಿಸಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ಅಬ್ದುಲ್ ಹಮೀದ್ ಉತ್ತಮವಾಗಿ ಕೆಲಸ ಮಾಡಿದ ಕಾರಣ ಪರಮವೀರ ಚಕ್ರ ಪ್ರಶಸ್ತಿ ಪಡೆದಿದ್ದಾರೆ. ಮಿಸೈಲ್ ಮ್ಯಾನ್ ಎಂದು ಖ್ಯಾತಿ ಪಡೆದ ಮಾಜಿ ರಾಷ್ಟ್ರಪತಿ ಅವರು ಅನೇಕ ಕೊಡುಗೆ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಹೊಸಪೇಟೆ ಶಾಸಕ ಗವಿಯಪ್ಪ, ರಾಯಚೂರು ಮಾಜಿ ಶಾಸಕ ಸೈಯದ್ ಯಾಸೀನ್, ಕಾಂಗ್ರೆಸ್ ಮುಖಂಡ ಮೊಹಮ್ಮದ್ ಶಾಲಂ ಸೇರಿದಂತೆ ಮುಸ್ಲಿಂ ಧರ್ಮಗುರುಗಳು ಮಾತನಾಡಿದರು.
ಮಹಾನಗರ ಪಾಲಿಕೆಯ ಉಪಾಧ್ಯಕ್ಷ ಜೆ.ಸಾಜೀದ್ ಸಮೀರ್, ಕಾಂಗ್ರೆಸ್ ಮುಖಂಡ ಬಷೀರುದ್ದೀನ್, ಧರ್ಮಗುರುಗಳಾದ ಸೈಯದ್ ಅಶ್ರಫ್ ರಝಾ ಹುಸೇನಿ, ಸೈಯದ್ ಅಮಿನುದ್ದೀನ್ ಖಾದ್ರಿ, ಖಾಜಾ ಬಾವುದ್ದೀನ್, ಯುನೂಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







