ರಾಯಚೂರು | 'ವಿಬಿ-ಜಿ ರಾಮ್ ಜಿ' ಕಾಯ್ದೆ ರದ್ದತಿಗೆ ಆಗ್ರಹಿಸಿ ಕಾಂಗ್ರೆಸ್‌ನಿಂದ ಬೃಹತ್ ಧರಣಿ ಸತ್ಯಾಗ್ರಹ

ರಾಯಚೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯನ್ನು ದುರ್ಬಲಗೊಳಿಸಲು ಕೇಂದ್ರದ ಬಿಜೆಪಿ ಸರ್ಕಾರ ಹುನ್ನಾರ ನಡೆಸುತ್ತಿದೆ. ಅದರ ಬದಲಿಗೆ ರೂಪಿಸಿರುವ 'ವಿಬಿ–ಜಿ ರಾಮ್ ಜಿ' ಕಾಯ್ದೆಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬುಧವಾರ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರದ ಜಿಲ್ಲಾ ಕ್ರೀಡಾಂಗಣದ ಬಳಿಯಿರುವ ಗಾಂಧಿ ಪ್ರತಿಮೆ ಎದುರು ಸಂಸದ ಜಿ. ಕುಮಾರ ನಾಯಕ, ವಿಧಾನ ಪರಿಷತ್ ಸದಸ್ಯ ಎ. ವಸಂತ ಕುಮಾರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಸಂಸದ ಜಿ. ಕುಮಾರ ನಾಯಕ್, ಗ್ರಾಮೀಣ ಭಾಗದ ಬಡ ಜನರಿಗೆ ಕನಿಷ್ಠ ಉದ್ಯೋಗ ಭದ್ರತೆ ಒದಗಿಸುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಮನರೇಗಾ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ, ಕೇಂದ್ರ ಸರ್ಕಾರವು ಹೊಸ ಕಾಯ್ದೆಯ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿದ್ದ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಇದು ಜನವಿರೋಧಿ ಮತ್ತು ಬಡವರ ಬದುಕಿಗೆ ಮಾರಕವಾದ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎ. ವಸಂತ ಕುಮಾರ್ ಮಾತನಾಡಿ, ಮನರೇಗಾದಲ್ಲಿ ತಂದಿರುವ ಬದಲಾವಣೆಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳಲಿವೆ. ಜನರನ್ನು ಜೀತದಾಳುಗಳಂತೆ ಕಾಣುವ ಇಂತಹ ನೀತಿಗಳನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಸರ್ಕಾರದ ಈ ಜನವಿರೋಧಿ ನಿಲುವುಗಳನ್ನು ಹಂತ ಹಂತವಾಗಿ ಜನರ ಮುಂದೆ ಬಹಿರಂಗಪಡಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ಹೋರಾಟ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು.
ಈ ಸಂದರ್ಭದಲ್ಲಿ ಮುಹಮ್ಮದ್ ಶಾಲಂ, ಅಸ್ಲಾಂ ಪಾಷಾ, ಶ್ರೀದೇವಿ ನಾಯಕ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ರಜಾಕ್ ಉಸ್ತಾದ್, ರವಿಪಾಟೀಲ್, ಎಪಿಎಂಸಿ ಅಧ್ಯಕ್ಷರಾದ ಜಯಂತರಾವ್ ಪತಂಗೆ, ಮಲ್ಲಿಕಾರ್ಜುನಗೌಡ ತಲಮಾರಿ, ಉಪಾಧ್ಯಕ್ಷ ಬಷೀರ್ ಅಹ್ಮದ್, ಗಿಲ್ಲೆಸೂಗೂರು ಬ್ಲಾಕ್ ಅಧ್ಯಕ್ಷ ಉರುಕುಂದಪ್ಪ ಮಟಮಾರಿ, ಸಿಂಡಿಕೇಟ್ ಸದಸ್ಯರಾದ ಚನ್ನಬಸವ, ಪವನ್ ಪಾಟೀಲ್, ರಾಮಣ್ಣ ಇರಬಗೇರಾ, ಅಯ್ಯಪ್ಪಸ್ವಾಮಿ ಜಾಲಹಳ್ಳಿ ಪರಿಶಿಷ್ಟ ಜಾತಿ ವಿಭಾಗ ನಗರ ಅಧ್ಯಕ್ಷ ವಿಶ್ವನಾಥ್ ಪಟ್ಟಿ, ವಿಜಯಪ್ರಕಾಶ್, ವೆಂಕಟೇಶ್ ಅರಳಿಕರ್, ಪಾರ್ಥಸಾರಥಿ, ಪರಶುರಾಮಲು, ಸುರೇಶ್ ಪಟ್ಟಿ, ನಾಗೇಶ್ವರರಾವ್, ನರಸಿಂಹಲು ರಾಂಪುರ, ಸತೀಶ್, ಉಮೇಶ್, ರಮೇಶ್, ಚಿನ್ನ ರಾಯುಡು, ಸಿದ್ದಪ್ಪ ರಾಂಪುರ, ಮುದ್ದುಕೃಷ್ಣ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹಲವರು ಉಪಸ್ಥಿತರಿದ್ದರು.







