Raichur | ಎಸ್‌ಐಆರ್ ಮೂಲಕ ಮತದಾರರ ಹಕ್ಕು ಕಸಿಯುವ ಸಂಚು: ಜೆ.ಎಂ.ವೀರಸಂಗಯ್ಯ ಆರೋಪ

ರಾಯಚೂರು: ಮತದಾನದ ವಿಧಾನ ಮತ್ತು ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಮೂಲಾಧಾರಗಳಾಗಿದ್ದು, ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಮೂಲಕ ಅವುಗಳನ್ನು ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ರೈತ ಮುಖಂಡ ಜೆ.ಎಂ. ವೀರಸಂಗಯ್ಯ ಆರೋಪಿಸಿದರು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಹೆಸರಿನಲ್ಲಿ ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಪಟ್ಟಿಯಿಂದ ತೆಗೆಯುವ ಮೂಲಕ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಸುಮಾರು 6 ಕೋಟಿ 50 ಲಕ್ಷ ಜನರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ 91 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಈ ಕುರಿತು ಲಕ್ಷಾಂತರ ಮತದಾರರು ಸುಪ್ರೀಂ ಕೋರ್ಟ್‌ಗೆ ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದರೂ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದಿಂದ ಸಮರ್ಪಕ ಸ್ಪಷ್ಟನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನುಸುಳುಕೋರರನ್ನು ಹೊರಗಿಡುವ ನೆಪದಲ್ಲಿ ಬಿಜೆಪಿಗೆ ಮತ ಹಾಕದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ರಾಜಕೀಯ ಪ್ರೇರಿತ ಕ್ರಮ ನಡೆಯುತ್ತಿದೆ. ಅಮಾಯಕ ನಾಗರಿಕರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿಯೂ ಲಕ್ಷಾಂತರ ಮಹಿಳೆಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆ ನಡೆಯುತ್ತಿದೆ. ರಾಯಚೂರು ಜಿಲ್ಲೆಯ ರೈತ ಸಂಘದ ಹೋರಾಟಗಾರ ಚಾಮರಸ ಮಾಲಿ ಪಾಟೀಲ ಅವರ ಹೆಸರೂ ಪಟ್ಟಿಯಿಂದ ಕೈಬಿಡುವ ಸಂದರ್ಭ ಉಂಟಾಗಿದೆ ಎಂದು ತಿಳಿಸಿದರು.
ಮತದಾನವು ಬಿ. ಆರ್. ಅಂಬೇಡ್ಕರ್ ಅವರು ನೀಡಿರುವ ಸಾಂವಿಧಾನಿಕ ಹಕ್ಕು. ಈ ಹಕ್ಕನ್ನು ಯಾರಿಗೂ ಕಸಿಯಲು ಅವಕಾಶ ನೀಡುವುದಿಲ್ಲ. ಎಸ್‌ಐಆರ್ ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ಅದನ್ನು ರದ್ದುಪಡಿಸಬೇಕು. ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಕೈಬಿಡಬಾರದು ಎಂದು ಆಗ್ರಹಿಸಿದರು.
ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದು, ಚುನಾವಣಾ ಆಯೋಗದ ಪಟ್ಟಿಯಲ್ಲಿ ಹಲವು ದಾಖಲೆಗಳನ್ನು ಕೇಳಲಾಗುತ್ತಿದೆ. ದಾಖಲೆ ಸಲ್ಲಿಸಿದ ಬಳಿಕವೂ ಸಾಫ್ಟ್‌ವೇರ್ ಪ್ರಕ್ರಿಯೆಯ ವ್ಯತ್ಯಾಸಗಳಿಂದ ಹೆಸರುಗಳು ಕೈಬಿಡಲಾಗುತ್ತಿವೆ ಎಂದು ಆರೋಪಿಸಿದರು.
ವಿಶೇಷವಾಗಿ 2022ರ ನಂತರ ಮದುವೆಯಾದ ಮಹಿಳೆಯರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗದ ಗಮನ ಸೆಳೆಯಲು ಜೂನ್ 13ರಿಂದ 18ರವರೆಗೆ ಐದು ಮಾರ್ಗಗಳಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜೂನ್ 20ರಂದು ಬೆಂಗಳೂರಿನಲ್ಲಿ ಎಸ್‌ಐಆರ್ ವಿರೋಧಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ಕಾಂಗ್ರೆಸ್ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಹ್ಮದ್ ಶಾಲಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಜಮಾತೆ ಇಸ್ಲಾಂ ಜಿಲ್ಲಾಧ್ಯಕ್ಷ ಅಸಿಮುದ್ದೀನ, ಅಖ್ತರ್, ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಮುಖಂಡ ಗುರುರಾಜ, ವಿಜಯರಾಣಿ, ಸುರೇಖಾ, ಮಾರೆಪ್ಪ ಹರವಿ ಉಪಸ್ಥಿತರಿದ್ದರು.






