ರಾಯಚೂರು: ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ; ಹಟ್ಟಿಯಲ್ಲಿ ಮನೆಗಳಿಗೆ ನುಗ್ಗಿದ ನೀರು

ರಾಯಚೂರು: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಅನೇಕ ಅವಾಂತರ ಸೃಷ್ಟಿಯಾಗಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಮಿಕರ ಹಾಗೂ ಸಿಬ್ಬಂದಿ ವಾಸ ಮಾಡುವ ಬಡಾವಣೆಯಲ್ಲಿ ಮಳೆನೀರು ಮನೆಗಳಿಗೆ ನುಗ್ಗಿದ್ದು ಶುಕ್ರವಾರ ರಾತ್ರಿಯಿಡೀ ನೀರು ಹೊರ ಹಾಕುವ ಕೆಲಸ ಮಾಡಬೇಕಾಯಿತು.
ಹಟ್ಟಿ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿಯೂ ಮಳೆ ನೀರು ನುಗ್ಗಿ ಮನೆಯ ವಸ್ತುಗಳು ಹಾಳಾಗಿವೆ. ಮನೆಗಳಲ್ಲಿದ್ದ ಮಕ್ಕಳು, ವಯೋ ವೃದ್ಧರು ಚಳಿಗೆ ನಡುಗಿದರು. ಮನೆಯ ನೀರು ಹೊರ ಹಾಕಲು ಕಂಪನಿಯ ಸಿಬ್ಬಂದಿ ಹರಸಾಹಸ ಪಟ್ಟರು. ರಾತ್ರಿ ಇಡೀ ಸುರಿದ ಮಳೆಗೆ ನಿದ್ದೆ ಇಲ್ಲದೇ ಕಳೆಯಬೇಕಾಯಿತು.
ರಾಯಚೂರು ತಾಲೂಕಿನ ಹಲವೆಡೆ ಜಿಟಿಜಿಟಿ ಮಳೆಯಿಂದಾಗಿ ಹತ್ತಿ, ಮೆಣಸಿನಕಾಯಿ ಹಾಗೂ ಇತರೆ ಬೆಳೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಯಿತು. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
Next Story





