ರಾಯಚೂರು: ಗುತ್ತಿಗೆ ಕಾರ್ಮಿಕರ ಹುದ್ದೆ ಖಾಯಂ ಮಾಡಲು ಆಗ್ರಹಿಸಿ ಧರಣಿ

ರಾಯಚೂರು: ಮಾಸಿಕ 36 ಸಾವಿರ ರೂ. ಕನಿಷ್ಠ ವೇತನ ನಿಗದಿ ಪಡಿಸಬೇಕು. ಗುತ್ತಿಗೆ ಕಾರ್ಮಿಕರ ಹುದ್ದೆಗಳು ಖಾಯಂ ಮಾಡಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಕಾರ್ಮಿಕರ ಜೀವನ ನಿರ್ವಹಣಾ ವೆಚ್ಚ ಮತ್ತು ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ರಪ್ತಕೋಸ್ ಬ್ರೆಟ್ ಆಂಡ್ ಕಂ ಪ್ರಕರಣದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಆಧರಿಸಿ ರಾಜ್ಯದಲ್ಲಿ ಕನಿಷ್ಠವೇತ ವೇತನ ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
ಹೆಚ್ಚಳ ಮಾಡಿರುವ ಕನಿಷ್ಠ ವೇತನವು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳಿಗೆ ಪೂರಕವಾಗಿಲ್ಲ. ಇವತ್ತಿನ ಬೆಲೆಗಳು ಮತ್ತು ಜೀವನ ವೆಚ್ಚಕ್ಕೆ ಅನುಗುಣವಾಗಿ 36 ಸಾವಿರ ರೂ. ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ 2025 ಎಪ್ರಿಲ್ 11 ರಿಂದಲೇ ಪೂರ್ವಾನ್ವಯಿಸಿ ಕನಿಷ್ಠ ವೇತನ ಜಾರಿಗೆ ತರುವ ಬದಲಾಗಿ 2026 ಮೇ 22 ರಂದು ಅಧಿಸೂಚನೆ ಹೊರಡಿಸಿದ ದಿನದಿಂದ ಜಾರಿಗೆ ತಂದಿರುವುದು, ಇದರಿಂದ ಕಾರ್ಮಿಕರಿಗೆ ಒಂದು ವರ್ಗದ ಆರಿಯರ್ಸ್ ಸಿಗದಂತೆ ಮಾಡಿದೆ. ಕನಿಷ್ಠ ವೇತನವನ್ನು ಎಪ್ರಿಲ್ 2025 ರಿಂದಲೇ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕರ ಪರ ಕರ್ನಾಟಕ ತಿದ್ದುಪಡಿಗಳನ್ನು ಮಾಡಿ ನಿಯಮಗಳನ್ನು ರೂಪಿಸಬೇಕು, ಕೇಂದ್ರ ಸರ್ಕಾರದ ನಾಲ್ಕು ಸಂಹಿತೆಗಳನ್ನು ಯಥಾವತ್ತಾಗಿ ರಾಜ್ಯದಲ್ಲಿ ಜಾರಿಗೆ ತರಬಾರದು. ದೇಶದ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿ ರಾಜ್ಯ ನಾಲ್ಕು ಸಂಹಿತೆಗಳಿಗೆ ಕಾರ್ಮಿಕರ ಪರವಾದ ಕರ್ನಾಟಕ ತಿದ್ದುಪಡಿಗಳನ್ನು ತರಬೇಕು. ನಂತರ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ, ಪದಾಧಿಕಾರಿ ಶಬೀರ್, ಪ್ರವೀಣರೆಡ್ಡಿ ಗುಂಜಳ್ಳಿ, ಗಿರಿಯಪ್ಪ ಪೂಜಾರಿ, ವರಲಕ್ಷ್ಮಿ, ಮಲ್ಲಿಕಾರ್ಜುನ ಮನ್ಸಲಾಪೂರು, ಗುರುರಾಜ ದೇಸಾಯಿ, ರಮಾದೇವಿ, ರುದ್ರಪ್ಪನಾಯಕ, ಮರಿಯಮ್ಮ, ಮಹ್ಮದ್ ಹನೀಫ್, ಅಲ್ಲಾಭಕ್ಷ, ಮಹ್ಮದ ಮಾನ್ವಿ ಕೆ.ಜಿ.ವೀರೇಶ್ ಸೇರಿದಂತೆ ಕಾರ್ಮಿಕರು ಪಾಲ್ಗೊಂಡಿದ್ದರು.






