ರಾಯಚೂರು | ಚಾಗಬಾವಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಿಲಿಂಡರ್ ಖಾಲಿ : 20 ದಿನಗಳಿಂದ ಮಕ್ಕಳಿಗಿಲ್ಲ ಉಪಹಾರ

ರಾಯಚೂರು: ಸಿರವಾರ ತಾಲ್ಲೂಕು ಚಾಗಬಾವಿ ಗ್ರಾಮದ ವಾರ್ಡ್ ಸಂಖ್ಯೆ 1ರ ಅಂಗನವಾಡಿ ಕೇಂದ್ರ ಸಂಖ್ಯೆ 1ರಲ್ಲಿ ಕಳೆದ ಸುಮಾರು 20 ದಿನಗಳಿಂದ ಗ್ಯಾಸ್ ಖಾಲಿಯಾಗಿರುವ ಕಾರಣದಿಂದ ಮಕ್ಕಳಿಗೆ ಉಪಹಾರ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಚಿಕ್ಕ ಮಕ್ಕಳು ಉಪಹಾರವಿಲ್ಲದೆ ಮೊಟ್ಟೆ ಕೈಯಲ್ಲಿ ಹಿಡಿದು ಮನೆಗೆ ಹಿಂತಿರುಗುವ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಶಿಶು ಅಭಿವೃದ್ಧಿ ಇಲಾಖೆಗೆ ಕೋಟ್ಯಂತರ ರೂಪಾಯಿಗಳನ್ನು ಮಂಜೂರು ಮಾಡುತ್ತಿದ್ದರೂ, ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವೇ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಪಾಲಕರು ದಿನಗೂಲಿ ಕೆಲಸಕ್ಕೆ ತೆರಳುವ ಮುನ್ನ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸುತ್ತಾರೆ. “ಮಕ್ಕಳು ಕೇಂದ್ರದಲ್ಲಿ ಉಪಹಾರ ಸೇವಿಸಿ ಮಧ್ಯಾಹ್ನ ಮನೆಗೆ ಬರುತ್ತಾರೆ” ಎಂಬ ನಂಬಿಕೆಯಿಂದ ಅವರನ್ನು ಕಳುಹಿಸುತ್ತಿದ್ದರೂ, ಕಳೆದ 20 ದಿನಗಳಿಂದ ಕೇಂದ್ರದಲ್ಲಿ ಅಡುಗೆ ಸೌಲಭ್ಯವೇ ಇಲ್ಲದ ಸ್ಥಿತಿ ಉಂಟಾಗಿದೆ.
ಸಾರ್ವಜನಿಕರು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಕ್ಷಣದ ಹಸ್ತಕ್ಷೇಪವನ್ನು ಬೇಡಿದ್ದಾರೆ. ಮಕ್ಕಳ ಪೌಷ್ಠಿಕತೆ ಹಾಗೂ ಆರೋಗ್ಯದ ವಿಚಾರದಲ್ಲಿ ಇಂತಹ ನಿರ್ಲಕ್ಷ್ಯ ಅಸಹ್ಯಕರ ಎಂದು ಗ್ರಾಮಸ್ಥರು ಖಂಡಿಸಿದ್ದಾರೆ.







