ರಾಯಚೂರು | ಫೈಲೇರಿಯಾ ರೋಗದ ಪ್ರಸರಣಾ ಮೌಲ್ಯಮಾಪನ ಸಮೀಕ್ಷೆಗೆ ಸಹಕರಿಸಿ: ತಹಶೀಲ್ದಾರ್ ಸುರೇಶ ವರ್ಮಾ

ರಾಯಚೂರು : ಆರೋಗ್ಯ ಇಲಾಖೆಯ ವಿಬಿಡಿಸಿ ಕಾರ್ಯಕ್ರಮದ ಫೈಲೇರಿಯಾ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆಗೆ ತಾಲೂಕಿನ ಎಲ್ಲ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಸಹಕಾರಿಸಬೇಕೆಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಿಬಿಡಿಸಿ ಕಾರ್ಯಕ್ರಮದ ಫೈಲೇರಿಯಾ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆಯ ತಾಲೂಕು ಮಟ್ಟದ ಟಾಸ್ಕಫೋರ್ಸ್ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಸುರೇಶ ವರ್ಮ, ತಾಲೂಕಿನ ಒಟ್ಟು 37 ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಹಾಗೂ ಹೆಚ್ಚುವರಿಯಾಗಿ ಆಯ್ಕೆಯಾದ 15 ಶಾಲೆಗಳಲ್ಲಿನ ಒಂದು ಹಾಗೂ ಎರಡನೇ ತರಗತಿಯ ವಿಧ್ಯಾರ್ಥಿಗಳಿಗೆ ಇಎಲ್‌ಎಫ್ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಾಲಾ ವ್ಯವಸ್ಥಾಪಕರು ಇಎಲ್‌ಎಫ್ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆ ಕೈಗೊಂಡು ಆರೋಗ್ಯ ಇಲಾಖೆಗೆ ಸಹಕಾರ ನೀಡುವಂತೆ ಸೂಚಿಸಿದರು.
ತಾಲೂಕಿನ ಯಾವುದೇ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಸಮೀಕ್ಷೆಗೆ ನಿರಾಕರಿಸಿದಲ್ಲಿ ಅಂತಹ ಶಾಲೆಯ ನೋಂದಣಿಯನ್ನು ರದ್ದುಪಡಿಸುವುದಾಗಿ ಸಭೆಯಲ್ಲಿ ಎಚ್ಚರಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯದ ಕಚೇರಿ ಅಧೀಕ್ಷಕರು, ತಾಲೂಕು ಆರೋಗ್ಯಾಧಿಕಾರಿಗಳು, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕು ವಿಬಿಡಿ ಮೇಲ್ವಿಚಾರಕರು ಉಪಸ್ಥಿತರಿದ್ದರು.





