ರಾಯಚೂರು : ಕೌಟುಂಬಿಕ ಕಲಹ ಹಿನ್ನೆಲೆ; ದಂಪತಿ, ಇಬ್ಬರು ಮಕ್ಕಳು ಆತ್ಮಹತ್ಯೆ

ರಾಯಚೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ, ಹೆಂಡತಿ ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜಲಾಲನಗರದಲ್ಲಿ ರವಿವಾರ ಬೆಳಿಗ್ಗೆ 7:30 ಸುಮಾರಿಗೆ ನಡೆದಿದೆ.
ಅರುಣಾ (46), ಶ್ಲೋಕ (10), ಖುಷಿ (8) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷ್ಣು ರೆಡ್ಡಿ (65) ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಅನೇಕ ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ರವಿವಾರ ಗಂಡ ಹೆಂಡತಿಯ ನಡುವೆ ಜಗಳ ನಡೆದಿದೆ. ಈ ವೇಳೆ ಬಳಿಕ ಗಂಡ ವಿಷ್ಣುರೆಡ್ಡಿ ಮನೆ ಬಿಟ್ಟು ಸಾಯುತ್ತೇನೆ ಎಂದು ಹೋಗಿದ್ದಾರೆ. ಸ್ವಲ್ಪ ಹೊತ್ತಲ್ಲೇ ಪತ್ನಿ ಅರುಣಾ, ಮಕ್ಕಳಾದ ಶ್ಲೋಕ ಹಾಗೂ ಖುಷಿಗೆ ವಿಷ ನೀಡಿ ತಾನೂ ಸೇವನೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ಸ್ವಲ್ಪ ಹೊತ್ತಿನ ಬಳಿಕ ಗಂಡ ವಿಷ್ಣುರೆಡ್ಡಿಗೆ ಮೊಬೈಲ್ ಕರೆ ಮಾಡಿ ಸಂಬಂಧಿಕರೊಬ್ಬರು ವಿಷಯ ತಿಳಿಸಿದ್ದಾರೆ. ಹೆಂಡತಿ ಮಕ್ಕಳು ಸಾವಿನ ಅಘಾತದಿಂದ ರಾಯಚೂರು ತಾಲೂಕಿನ ಚಿಕ್ಕಸುಗೂರು ಬಳಿಯ ರೈಲ್ವೆ ಹಳಿಗೆ ಬಿದ್ದು ವಿಷ್ಣು ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ರೈಲ್ವೆ ಪೊಲೀಸರು ವಿಷ್ಣುರೆಡ್ಡಿಯ ಮೃತದೇಹ ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಭೇಟಿ: ಅರುಣಾ ಹಾಗೂ ಮಕ್ಕಳ ಸಾವಿನ ಸುದ್ದಿ ತಿಳಿದು ಬೆಳಿಗ್ಗೆ ಮೃತರ ನಿವಾಸಕ್ಕೆ ಡಿವೈಎಸ್ ಪಿ ಶಾಂತವೀರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು.
ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.






