Raichur | ನೀಟ್ ಅಕ್ರಮ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ರಾಯಚೂರು, ಜು.20: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ನೀಟ್ ಪರೀಕ್ಷೆಗೆ ಸಂಬಂಧಿಸಿದ ಘಟನೆಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) [ಸಿಪಿಐ(ಎಂ)] ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಟಿಪ್ಪು ಸುಲ್ತಾನ್ ಉದ್ಯಾನದ ಸಮೀಪ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ ಮಾತನಾಡಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವು ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ, ನೀಟ್ ಪರೀಕ್ಷೆಯ ಅಕ್ರಮಗಳಿಂದ ಸಂಕಷ್ಟಕ್ಕೊಳಗಾದ ಸಾವಿರಾರು ವಿದ್ಯಾರ್ಥಿಗಳ ಪರವಾಗಿ ನಡೆಯುತ್ತಿರುವ ಪ್ರಜಾಸತ್ತಾತ್ಮಕ ಹೋರಾಟವಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆಗಳಿಗೆ ಗೌರವ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹೋರಾಟಗಾರರೊಂದಿಗೆ ತಕ್ಷಣ ಸಂವಾದ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನೀಟ್ ಪರೀಕ್ಷೆಯ ಅಕ್ರಮಗಳಿಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ನೀಟ್‌ಗೆ ಸಂಬಂಧಿಸಿದ ಘಟನೆಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು. ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರೊಂದಿಗೆ ಕೇಂದ್ರ ಸರ್ಕಾರ ತಕ್ಷಣ ಮಾತುಕತೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹೆಚ್. ಪದ್ಮಾ, ಡಿ.ಎಸ್. ಶರಣಬಸವ, ಕರಿಯಪ್ಪ ಅಚ್ಚೋಳಿ, ವರಲಕ್ಷ್ಮೀ, ಗೋಕಾರಮ್ಮ, ಶರಣಮ್ಮ, ಜಮಲಮ್ಮ, ಜಿಲಾನಿ ಪಾಷಾ, ಶ್ರೀನಿವಾಸ, ನರಸಪ್ಪ, ಅಡಿವೆಪ್ಪ, ರಾಮರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.






