ರಾಯಚೂರು| ತಾಲೂಕು ಸಾರ್ವಜನಿಕ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ಸಿಪಿಐ(ಎಂಎಲ್) ಆಗ್ರಹ

ಸಿಂಧನೂರು: ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಮಗ್ರವಾಗಿ ಸುಧಾರಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಸೌಲಭ್ಯ ಒದಗಿಸಬೇಕು ಹಾಗೂ ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್ ವತಿಯಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಸುರೇಶಗೌಡ ಅವರ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೋಮವಾರ ಮನವಿ ರವಾನಿಸಲಾಯಿತು.
ಈ ವೇಳೆ ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ, ಸಿಂಧನೂರು ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಚಿಕಿತ್ಸೆ ಪಡೆಯಲು ರೋಗಿಗಳು ವೈದ್ಯರಿಗಾಗಿ ದಿನವೂ ಗಂಟೆಗಟ್ಟಲೇ ಕಾಯುವಂತಾಗಿರುತ್ತದೆ. ಔಷಧಿಗಳ ಕೊರತೆ, ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ನಡುವಿನ ಹೊಂದಾಣಿಕೆ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಕುರಿತು ಮೇಲಿಂದ ಮೇಲೆ ನಾಗರಿಕರಿಂದ ವ್ಯಾಪಕ ಆರೋಪಗಳು ಕೇಳಿಬಂದಿವೆ. ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯೂ ಬಡಜನರಿಗೆ ಚಿಕಿತ್ಸೆ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಹೆಸರಿಗೆ ಮಾತ್ರ 100 ಹಾಸಿಗೆಯ ಸರಕಾರಿ ಆಸ್ಪತ್ರೆಯಾಗಿದ್ದು, ಇಲ್ಲಿ ಚಿಕಿತ್ಸೆ ಅರಸಿ ಬರುವವರು ಒಂದಲ್ಲೊಂದು ಸಮಸ್ಯೆ, ಸವಾಲು ಎದುರಿಸುತ್ತಿದ್ದಾರೆ. ಬೆಳಿಗ್ಗೆ ಜನ ಜಂಗುಳಿಯ ನಡುವೆ ಚೀಟಿ ಕೌಂಟರ್‌ನ ಮುಂದೆ ನಿಂತು, ಚೀಟಿ ಪಡೆದು ವೈದ್ಯರ ಕೊಠಡಿಯತ್ತ ಹೋದರೆ ಮುಚ್ಚಿದ ಬಾಗಿಲು ಇಲ್ಲವೇ, ಬಾಗಿಲು ತೆರೆದಿದ್ದರೂ ವೈದ್ಯರು ಇಲ್ಲದಿರುವುದು ಕಂಡುಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ, ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ಇತ್ತೀಚೆಗೆ ತಾಯಿ ಮಕ್ಕಳ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಒದಗಿಸಲಾಗಿದೆ. ಆದರೆ ಹೊಸ ಆಸ್ಪತ್ರೆಯಲ್ಲಿ ಇನ್ನೂ ಹಲವು ಕೊರತೆಗಳಿದ್ದು, ಇದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ. 60 ಬೆಡ್‌ನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಇದುವರೆಗೂ ಪೂರ್ಣ ಪ್ರಮಾಣದ ವೈದ್ಯ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಅಗತ್ಯ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದರಿಂದ ಮಹಿಳಾ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಸದಸ್ಯರಾದ ರಾಘವೇಂದ್ರ ಉಪ್ಪಳ, ಶ್ರೀನಿವಾಸ ಬುಕ್ಕನಟ್ಟಿ, ಮಹಾದೇವ ಅಮರಾಪುರ, ಕಂಠೆಪ್ಪ ರೈತನಗರ ಕ್ಯಾಂಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







