ರಾಯಚೂರು | ಕೇಂದ್ರ ಬಜೆಟ್ ವಿರುದ್ಧ ಸಿಪಿಐಎಂಎಲ್ ಲಿಬರೇಶನ್ ಪ್ರತಿಭಟನೆ

ರಾಯಚೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2025-26ನೇ ಸಾಲಿನ ಬಜೆಟ್ ಕಾರ್ಪೊರೆಟ್ ಪರವಾಗಿದ್ದು, ಜನಸಾಮಾನ್ಯರ ಕಲ್ಯಾಣಕ್ಕೆ ಯಾವುದೇ ಅದ್ಯತೆ ನೀಡಿಲ್ಲ ಎಂದು ಆರೋಪಿಸಿ ಸಿಪಿಐಎಂಎಲ್ ಲಿಬರೇಶನ್ ಪಕ್ಷವು ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿತು.
ಕೇಂದ್ರ ಬಜೆಟ್ ಬಹಳ ಸ್ಪಷ್ಟವಾಗಿ ಕಾರ್ಪೊರೇಟ್ ಚಮಚಾಗಳಿಗೆ ಮತ್ತು ಶ್ರೀಮಂತರಿಗಾಗಿ ತಯಾರಿಸಿದ ಬಜೆಟ್ ಆಗಿದೆ. ರೈತರ, ಕಾರ್ಮಿಕರ, ದಲಿತರ, ಮಹಿಳೆಯರ, ವಿದ್ಯಾರ್ಥಿ, ಯುವಜನರ ಒಟ್ಟಾರೆಯಾಗಿ ಬಡವರ ಜೀವನೋಪಾಯದ ಮೇಲೆ ನಡೆಸಿದ ಕ್ರೂರ ದಾಳಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ, ಆಹಾರ ಭದ್ರತೆ, ನರೇಗಾ ಸೇರಿದಂತೆ ಹಲವು ಬಡವರ ಕಲ್ಯಾಣದ ಕಾರ್ಯಕ್ರಮಗಳಿಗೆ ತೀವ್ರವಾದ ರೀತಿಯಲ್ಲಿ ಅನುದಾನ ಕಡಿತಗೊಳಿಸಿದೆ. ಬೆಲೆ ಏರಿಕೆ, ನಿರುದ್ಯೋಗ, ಹಸಿವು,ವಲಸೆ,ಸಾಲಭಾಧೆ ಮುಂತಾದ ಅರ್ಥಿಕ ಸಂಕಷ್ಟಗಳಿಗೆ ಸಿಲುಕಿರುವ ದುಡಿಯುವ ವರ್ಗಕ್ಕೆ ಯಾವುದೇ ರೀತಿಯಲ್ಲೂ ನೆರವಾಗದೇ, ಬಹು ರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳ ಹಿತರಕ್ಷಣೆಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ರೈತರ ಬಹಳ ಪ್ರಧಾನವಾದ ಹಕ್ಕೊತ್ತಾಯಗಳಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ, ಸಾಲಭಾಧೆಯಿಂದ ಮುಕ್ತಿ, ಕೃಷಿ ಲಾಗುವಾಡುಗಳ ವೆಚ್ಚ ಕಡಿತ, ರೈತರ ಕೃಷಿ ಭೂಮಿ ಹಾಗೂ ಬೆಳೆ ಸಂಪತ್ತಿನ ಕಾರ್ಪೊರೇಟ್ ಲೂಟಿಗೆ ಪರಿಣಾಮಕಾರಿ ನಿಯಂತ್ರಣದ ಆಗ್ರಹಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ವಿದೇಶಿ ಬಂಡವಾಳಕ್ಕೆ ಸಂಪೂರ್ಣ ಮಣೆ ಹಾಕಿ ,ವೇಗದ ಖಾಸಗೀಕರಣ ಕ್ಕೆ ಒತ್ತು ನೀಡಿರುವ ಈ ಬಜೆಟ್ ಒಟ್ಟಾರೆಯಾಗಿ ನಿರುದ್ಯೋಗ, ಬೆಲೆ ಏರಿಕೆ, ಬಡತನ, ದಾರಿದ್ರ್ಯ, ವಲಸೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಕೃಷಿ ರಂಗವನ್ನು ಕಾರ್ಪೋರೇಟೀಕರಣಗೊಳಿಸಲು ಒಂದು ಸಾಧನವಾಗಿ ಈ ಬಜೆಟ್ ರೂಪಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಬಜೆಟ್ ಸಂಪೂರ್ಣವಾಗಿ ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ದುಡಿಯುವ ಜನರ ವಿರೋಧಿಯಾಗಿದ್ದು. ಸಿಪಿಐಎಂಎಲ್ ಲಿಬರೇಶನ್ ಪಕ್ಷ ಬಲವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಅಝೀಝ್ ಜಾಗೀರ್ದಾರ್ ರವಿಚಂದ್ರ, ಬಸವರಾಜ ಬೇಳಗುರ್ಕಿ, ಚಾಂದಾಸಾಬ್ ಬೆಳ್ಳಿಗಿನೂರು, ಶ್ರೀನಿವಾಸ ಬುಕ್ಕನ್ನಟ್ಟಿ, ಹನೀಫ್ ಅಬಕಾರಿ, ಜೀಲಾನಿ ಯರಗೇರಾ ಉಪಸ್ಥಿತರಿದ್ದರು.