Raichur | ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಖಂಡಿಸಿ ಸಿಪಿಐ(ಎಂಎಲ್) ಲಿಬರೇಶನ್ ಧರಣಿ

ರಾಯಚೂರು: ದೆಹಲಿಯ ಜಂತರ್ ಮಂತರ್‌ನಿಂದ ‘ಸಂಸತ್ ಚಲೋ’ ಕಾರ್ಯಕ್ರಮದ ಅಂಗವಾಗಿ ಶಾಂತಿಯುತ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದಿರುವ ಪೊಲೀಸ್ ಕ್ರಮವನ್ನು ಖಂಡಿಸಿ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಕಾರ್ಯಕರ್ತರು ಗುರುವಾರ ನಗರದ ಮಹಾತ್ಮ ಗಾಂಧಿ ಪುತ್ತಳಿ ಬಳಿ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ವಿಫಲವಾದ ಸರ್ಕಾರ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ತನ್ನ ದಮನಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಆರೋಪಿಸಿದರು.
ಪ್ರತಿಭಟನೆ ನಡೆಸುವುದು ಸಂವಿಧಾನಬದ್ಧ ಹಕ್ಕಾಗಿದ್ದು, ತಮ್ಮ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕಗಳು, ಫಲಕಗಳು ಹಾಗೂ ನ್ಯಾಯದ ಬೇಡಿಕೆಗಳಿದ್ದರೆ, ಸರ್ಕಾರದ ಕೈಯಲ್ಲಿ ಲಾಠಿ, ಬ್ಯಾರಿಕೇಡ್ ಮತ್ತು ಅಶ್ರುವಾಯುಗಳಿದ್ದವು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಸರ್ಕಾರ ಪೊಲೀಸ್ ಬಲದ ಮೂಲಕ ಅವರ ಧ್ವನಿಯನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಟೀಕಿಸಿದರು.
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತ ಶಾಂತಿಯುತ ಸತ್ಯಾಗ್ರಹಗಳನ್ನು ದಮನಿಸಲು ಪ್ರಯತ್ನಿಸಿದ್ದನ್ನು ಉಲ್ಲೇಖಿಸಿದ ಅವರು, ಇಂದಿನ ಘಟನೆ ಕೂಡ ಅದೇ ರೀತಿಯ ದಮನಕಾರಿ ಆಡಳಿತದ ಪ್ರತಿಬಿಂಬವಾಗಿದೆ ಎಂದು ಆರೋಪಿಸಿದರು.
ಗಾಯಗೊಂಡ ವಿದ್ಯಾರ್ಥಿಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ಒದಗಿಸಬೇಕು, ಬಂಧನಕ್ಕೊಳಗಾದ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಈ ಘಟನೆಗೆ ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ ಕ್ಷೇತ್ರದಲ್ಲಿನ ವೈಫಲ್ಯಗಳ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳ ನ್ಯಾಯಸಮ್ಮತ ಹೋರಾಟದೊಂದಿಗೆ ಸದಾ ನಿಲ್ಲುವುದಾಗಿ ಪಕ್ಷದ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಮುಖಂಡರಾದ ಜಿಲಾನಿ ಯರಿಗೇರಾ, ಭೀಮಯ್ಯ, ನಿಸಾರ್ ಅಹಮದ್, ಜಗದೀಶ್, ಮುಸ್ತಫಾ, ಮಹೇಂದ್ರ, ಅಮೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






