Raichur | ಲೆನಿನ್ ಪ್ರತಿಮೆ ಧ್ವಂಸ ಖಂಡಿಸಿ ಸಿಪಿಐಎಂಎಲ್ ಪ್ರತಿಭಟನೆ

ರಾಯಚೂರು: ಸಿಪಿಐಎಂಎಲ್ ಲಿಬರೇಶನ್ ಪಕ್ಷದ ರಾಯಚೂರು ತಾಲೂಕು ಸಮಿತಿ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್‌ನಲ್ಲಿ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಪ್ರತಿಮೆ ಧ್ವಂಸಗೊಳಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಪಕ್ಷದ ಮುಖಂಡರು ಲೆನಿನ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ, ಮೇ 5ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಪಕ್ಷದ ತಾಲೂಕು ಕಾರ್ಯದರ್ಶಿ ಅಜೀಜ್ ಜಾಗೀರದಾರ್, ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಬೆಳವಣಿಗೆಗಳು ಆತಂಕಕಾರಿ ಎನ್ನುವ ಆರೋಪ ಮಾಡಿದರು. ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ದೂರಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಜನದ್ರೋಹಿ ರಾಜಕಾರಣದಲ್ಲಿ ತೊಡಗಿವೆ ಎಂದು ಆರೋಪಿಸಿದ ಅವರು, ಲೆನಿನ್ ಪ್ರತಿಮೆ ಧ್ವಂಸ ಘಟನೆ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಪ್ರತಿಭಟನಾಕಾರರು ರಾಷ್ಟ್ರಪತಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಪಶ್ಚಿಮ ಬಂಗಾಳದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮವಹಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಜಿಲಾನಿ ಯರಿಗೇರಾ, ಭೀಮಯ್ಯ, ನಿಸಾರ್ ಅಹಮದ್, ಹನೀಫ್ ಅಬಕಾರಿ, ಜಗದೀಶ್, ಚಾಂದ್ ಪಾಶ, ಎಲ್ಲಪ್ಪ, ಮಾರಣ್ಣ, ನರಸಪ್ಪ, ಮೂವೀಸ್ ಇದ್ದರು.






