ರಾಯಚೂರು | ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಸುಗ್ರೀವಾಜ್ಞೆ : ಜನಸೇವಾ ಫೌಂಡೇಶನ್ ನಿಂದ ಸಿ.ಎಂ ಬ್ಯಾನರ್ ಗೆ ಹಾಲಿನ ಅಭಿಷೇಕ

ರಾಯಚೂರು : ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಪ್ಪಿಸಲು ಸುಗ್ರಿವಾಜ್ಞೆ ಮೂಲಕ ಕಾನೂನು ರಚಿಸಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ವಾಗತಿಸಿ ಜನಸೇವಾ ಫೌಂಡೇಶನ್ ನಿಂದ ರಾಯಚೂರಿನ ನೂತನ ಜಿಲ್ಲಾಡಳಿತ ಭವನದ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಭಾವಚಿತ್ರಗಳಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡಿದರು.
ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಪಡೆದ ಮಹಿಖೆಯರಿಗೆ ಮಾನಸಿಕ ಕಿರುಕುಳ ನೀಡಿ ಸಾಲದ ಕಂತುಗಳ ಪಾವತಿಗೆ ಹಗಲು, ರಾತ್ರಿ ಎನ್ನದೇ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸುತ್ತಿದ್ದರು. ಸಾಲ ಪಡೆದ ಮಹಿಳೆಯರು ಪರಿಪರಿಯಾಗಿ ಕಾಲವಕಾಶಕ್ಕೆ ಮನವಿ ಮಾಡಿದರೂ, ದೌರ್ಜನ್ಯ ನಡೆಸುತ್ತಿದ್ದರು. ಅಧಿಕಾರಿಗಳ ಕಿರುಕುಳಕ್ಕೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಘಟನೆಯ ಮುಖಂಡರು ದೂರಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೂಲಿ ಕೆಲಸ ಮಾಡುವ, ಅಮಾಯಕ ಹಾಗೂ ಅನಕ್ಷರಸ್ಥ ಮಹಿಳೆಯನ್ನೇ ಗುರಿಯಾಗಿಸಿಕೊಂಡು ಸಾಲ ಕೊಡುತ್ತಿದ್ದರು. ರಾಜ್ಯ ಕಾಂಗ್ರೇಸ್ ಸರ್ಕಾರವು ಸುಗ್ರೀವಾಜ್ಞೆ ಜಾರಿ ಮಾಡಿರುವುದರಿಂದ ಮಹಿಳಾ ಗುಂಪುಗಳ ಕುಟುಂಬಗಳು ನೆಮ್ಮದಿಯ ಜೀವನಕ್ಕೆ ಅವಕಾಶ ಮಾಡಿಕೊಟ್ಟ ಶ್ಲಾಘನೀಯ ಎಂದು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಫೌಂಡೇಶನ್ ಪದಾಧಿಕಾರಿಗಳು ಹಾಗೂ ಮಹಿಳೆಯರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಚಿವ ಎನ್.ಎಸ್.ಬೋಸರಾಜು, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಎಚ್.ಕೆ.ಪಾಟೀಲ್ ಅವರ ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿದರು.
ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟಿದ್ದ ಸಂತ್ರಸ್ತ ಕುಟುಂಬಗಳ ಸಾಲ ಮನ್ನಾ ಮಾಡಬೇಕು. ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯಾಧ್ಯಕ್ಷ ಜಾವೀದ್ ಖಾನ್, ಮಹೇಶ ಛಲವಾದಿ ಬೆಟ್ಟದೂರು, ಮೋದಿನಾ, ಸರೋಜಮ್ಮ, ವಿನೋದ್ ಕುಮಾರ, ಬುಜ್ಜಮ್ಮ ಉಪಸ್ಥಿತರಿದ್ದರು.







