ರಾಯಚೂರು | ಡಿಸೆಂಬರ್ 20, 21ರಂದು ದಲಿತ ಸಾಹಿತ್ಯ ಸಮ್ಮೇಳನ

ರಾಯಚೂರು : ಬಂಡಾಯ ಸಾಹಿತ್ಯದ ನೆಲೆಯಾದ ರಾಯಚೂರು ನಗರದಲ್ಲಿ ಮುಂದಿನ ಡಿಸೆಂಬರ್ 20 ಹಾಗೂ 21 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಈ ಸಮ್ಮೇಳನದಲ್ಲಿ ಭಾರತದ ಸಂವಿಧಾನ ಎಂಬ ಅಡಿ ಬರಹದೊಂದಿಗೆ ವಿಚಾರಗಳ ಅವಲೋಕನ ನಡೆಯಲಿವೆ. ಹಾಗಾಗಿ ಈ ಸಮ್ಮೇಳನ ಯಶಸ್ವಿಗೆ ಈ ಜಿಲ್ಲೆಯ ಪ್ರತಿಯೊಬ್ಬ ಪ್ರಗತಿ ಪರ ಚಿಂತಕರು, ಸಾಹಿತಿಗಳು, ದಲಿತ ಮತ್ತು ಕನ್ನಡ ಪರ ಸಂಘಟನೆಗಳ ಪ್ರಮುಖರು ಕೈಜೋಡಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಹೇಳಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ 11ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಡಾ.ಅರ್ಜುನ ಗೊಳಸಂಗಿ ಮಾತನಾಡಿದರು.
ದಲಿತ ಸಾಹಿತ್ಯ ಸಮ್ಮೇಳನದ ಸಂಯೋಜಕರಾದ ತಾಯರಾಜ್ ಮಾತನಾಡಿ, ಎಲ್ಲರ ಸಹಕಾರ ಮತ್ತು ಸಹಾಯ ಇದ್ದರೆ ಮಾತ್ರ ಸಮ್ಮೇಳನ ಅಭೂತ ಪೂರ್ವ ಯಶಸ್ವಿಯಾಗುತ್ತದೆ. ಈ ಸಮ್ಮೇಳನದ ಅಂಗವಾಗಿ ರಚಿಸಿದ ಸಮಿತಿಯಲ್ಲಿನ ಪ್ರತಿಯೊಬ್ಬರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ಡಾ.ಹುಸೇನಪ್ಪ ಅಮರಾಪುರ, ದೇವದುರ್ಗದ ಡಾ.ಮಲ್ಲಯ್ಯ ಅತ್ತನೂರು, ಬಸವರಾಜ ಬ್ಯಾಗವಾಟ, ಮಾನವಿಯ ಈರಣ್ಣ ಆರ್.ಕೆ.ರಾಘವೇಂದ್ರ ಚೌಡಿಕೆ, ಡಾ.ಹುಲುಗಪ್ಪ, ಡಾ.ಬಸವರಾಜ ಸಂಕೇಶ್ವರ, ಸಬ್ಜಲಿ, ವಾಜಿದ ಸಾಜಿದ , ವೆಂಕಟೇಶ್ ಬೇವಿನ ಬೆಂಚಿ, ಕೋರೆನಲ್, ಚಂದ್ರಬಂಡ ವೆಂಕಟೇಶ್, ಜಿಂದಪ್ಪ, ಮೂರ್ತಿ, ಬೂದೇಪ್ಪ ಸತ್ಪಾಡೆ, ಡಾ.ಬಸವರಾಜ, ರಂಗಮುನಿ ದಾಸ್ ,ಧರ್ಮಾವತಿ ಎಸ್.ನಾಯಕ, ಭೀಮಣ್ಣ ಉಡುಮಗಲ್, ಸಿರವಾರ ಶಾಂತಪ್ಪ ಪಿತಗಲ್, ಅನಿಲ್ ಕುಮಾರ್, ಚಂದ್ರಪ್ಪ ಚುಟುಕಲ, ಆರಿಫ್ ಮತ್ತು ದಲಿತ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು.







