ರಾಯಚೂರು | ಮುನ್ನೂರುಕಾಪು ಸಮಾಜದಿಂದ ದಸರಾ ನವರಾತ್ರೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ

ರಾಯಚೂರು : ನಗರ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಸಮಾಜವೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭಾನ್ವಿತ ಯುವಕರಿಗೆ ವೇದಿಕೆ ಕಲ್ಪಿಸಿ, ಈ ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ಸಾಂಸ್ಕೃತಿಕ ರೂವಾರಿ, ಮುನ್ನೂರುಕಾಪು ಸಮಾಜದ ಹಿರಿಯರು ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.
ನಗರದ ಗದ್ವಾಲ್ ರಸ್ತೆಯ ಶ್ರೀಲಕ್ಷಮ್ಮದೇವಿ ಮತ್ತು ಕಾಳಿಕಾಂಬ ದೇವಾಲಯದಲ್ಲಿ ಗುರುವಾರ ಆಯೋಜಿಸಿದ ನವರಾತ್ರಿ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಜೊತೆಗೆ ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯ ಪ್ರತಿಭೆಗಳು ಅರಳಲು ಅವಕಾಶ ದೊರೆಯುತ್ತದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯದಿರುವುದರಿಂದ ಅನೇಕ ಪ್ರತಿಭೆಗಳು ಅವಕಾಶ ವಂಚಿತವಾಗುತ್ತಿವೆ. ಮುನ್ನೂರುಕಾಪು ಸಮಾಜ ಕಳೆದ 25 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ಹಬ್ಬ ಮತ್ತು ದಸರಾ ನವರಾತ್ರಿ ಕಾರ್ಯಕ್ರಮಗಳ ಮೂಲಕ ಪ್ರತಿಭಾನ್ವಿತ ತಂಡಗಳಿಗೆ ವೇದಿಕೆ ಕಲ್ಪಿಸುತ್ತಿದೆ. ಇತರ ಸಮಾಜಗಳು ಈ ದಾರಿಗೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಆರ್.ಕೆ. ಅಮರೇಶ, ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಸರಾ ಹಬ್ಬವೆಂದರೆ ಸಂಸ್ಕೃತಿ ಉತ್ಸವ. ಮುನ್ನೂರುಕಾಪು ಸಮಾಜವು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಅದ್ದೂರಿಯಾಗಿ ನವರಾತ್ರಿ ಹಬ್ಬವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಮಿರ್ಜಾಪೂರು ಮಾತನಾಡಿ, ಪಾಪಾರೆಡ್ಡಿ ಅವರು ಕಲಾವಿದರಿಗೆ ಸದಾ ವೇದಿಕೆ ಕಲ್ಪಿಸುತ್ತಿದ್ದಾರೆ. ಕರ್ನಾಟಕ ಕಿರೀಟ ಎ. ಪಾಪಾರೆಡ್ಡಿ ಎಂದು ಕರೆಯುವುದರಲ್ಲಿ ತಪ್ಪಿಲ್ಲ ಎಂದರು.
ಹಿರಿಯ ಸಾಹಿತಿ ವೀರ ಹನುಮಾನ್ ಉಪನ್ಯಾಸ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಉಟುಕೂರು ಕೃಷ್ಣಮೂರ್ತಿ, ಗಾಧರ ಬೆಟ್ಟಪ್ಪ, ಎನ್.ಕೆ. ನಾಗರಾಜ, ಪೊಗಳ್ ಶ್ರೀನಿವಾಸ್ ರೆಡ್ಡಿ, ಮಹೇಂದ್ರರೆಡ್ಡಿ, ಪುಂಡ್ಲ ರಾಜೇಂದ್ರರೆಡ್ಡಿ, ಬಂಗಿ ಮುನಿರೆಡ್ಡಿ ಸೇರಿದಂತೆ ಮುನ್ನೂರುಕಾಪು ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.







