ರಾಯಚೂರು | ದಲಿತ ಯುವತಿಯ ಕೊಲೆ ಪ್ರಕರಣ; ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ರಾಯಚೂರು: ಹೊಕ್ರಾಣಿಯಲ್ಲಿ ನಡೆದ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ನಾಲ್ಕನೆ ಆರೋಪಿಗೂ ಶೀಘ್ರವೇ ಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ ಒತ್ತಾಯಿಸಿದರು.
ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹೊಕ್ರಾಣಿ ಪ್ರಕರಣದಲ್ಲಿ ಯುವತಿ ಬುಧವಾರ ರಾತ್ರಿ ಬಯಲು ಬಹಿರ್ದೆಸೆಗೆ ಹೋಗಿ ಕಾಣೆಯಾಗಿದ್ದಳು. ಪೋಷಕರು ರಾತ್ರಿಯೇ ದೂರು ನೀಡಿದ್ದರು. ಮರುದಿನವ ಬಾವಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ರಾತ್ರಿ ಸರಿಯಾಗಿ ಹುಡುಕಾಡಿದ್ದರೆ ಬದುಕುಳಿಯುತ್ತಿದ್ದರು. ಇದರಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದು ಇದು ದಿಲ್ಲಿಯ ನಿರ್ಭಯ ಪ್ರಕರಣದಂತೆ ಭೀಕರ ಪ್ರಕರಣವಾಗಿದೆ. ಇದೊಂದು ವಿಶಿಷ್ಟ, ಸೂಕ್ಷ್ಮ ಪ್ರಕರಣವೆಂದು ಪರಿಗಣಿಸಿ ಯಾವುದೇ ಒತ್ತಡಕ್ಕೆ ಒಳಗಾಗದೇ ತನಿಖೆ ಮಾಡಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇತ್ತೀಚೆಗೆ ದೇವದುರ್ಗ ತಾಲೂಕಿನಲ್ಲಿ ಭೂಮಾನಂದ ಕೊಲೆ ಪ್ರಕರಣ, ಗಿಲ್ಲೆಸೂಗೂರು ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಕೊಲೆ, ಬುಧವಾರವೇ ಲಿಂಗಸುಗೂರಿನ ಕರಡಕಲ್ ನಲ್ಲಿ ಉರುವಲು ಕಟ್ಟಿಗೆ ತರಲು ಹೋದ ದಲಿತ ಮಹಿಳೆಯ ಕೊಲೆಯಾಗಿದೆ. ಈ ನಾಲ್ಕು ಪ್ರಕರಣ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ತೀವ್ರ ಆಘಾತ ಹಾಗೂ ಅಭದ್ರತೆ ಮೂಡಿಸುತ್ತಿದೆ. ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ಇಲಾಖೆಯ ಆಡಳಿತದ ಮೇಲೆ ಗಂಭೀರ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ದಲಿತರ ಮೇಲೆ ಅತ್ಯಾಚಾರ, ಕೊಲೆ, ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ತಿಂಗಳಿಗೊಮ್ಮೆ ಎಸ್ ಸಿ/ಎಸ್ ಟಿ ಕುಂದುಕೊರತೆ ಸಭೆ ನಡೆಸುವುದು ಆದೇಶವಿದ್ದರೂ ಜಿಲ್ಲಾ ಪೊಲೀಸ್ ಇಲಾಖೆ ಸಭೆ ನಡೆಸುತ್ತಿಲ್ಲ. ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಗಾಂಜಾ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಅಪರಾಧ ಚಟುವಟಿಕೆಗಳಿಗೆ ಆಸ್ಪದ ನೀಡುತ್ತಿದೆ ಎಂದರು.
ಹಿರಿಯ ಮುಖಂಡ ರವೀಂದ್ರನಾಥ ಪಟ್ಟಿ ಮಾತನಾಡಿ, ಹೊಕ್ರಾಣಿಯ ಯುವತಿಯ ಕೊಲೆ, ಲಿಂಗಸೂಗೂರು ಮಹಿಳೆಯ ಕೊಲೆ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಮಾನವೀಯತೆ ಉಳ್ಳ ಎಲ್ಲರೂ ಇದನ್ನು ಖಂಡಿಸಬೇಕು. ಬೇರೆ ರಾಜ್ಯದಲ್ಲಿ ಇದನ್ನು ರಾಷ್ಟ್ರ ಮಟ್ಟದ ಸುದ್ದಿ ಮಾಡಲಾಗುತ್ತಿತ್ತು. ನಮ್ಮಲ್ಲಿ ಯಾಕೆ ಆಗಿಲ್ಲ ದಲಿತ ಸಕುದಾಯಗಳ ಜೀವಕ್ಕೆ ಬೆಲೆ ಇಲ್ವಾ ಎಂದು ಪ್ರಶ್ನಿಸಿದರು.
ಹೊಕ್ರಾಣಿಯ ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಯಾರ ಒತ್ತಡಕ್ಕೆ ಬಲಿಯಾಗದೇ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ಕುಟುಂಬಕ್ಕೆ 50 ಲಕ್ಷ ಪರಿಹಾರ ಹಾಗೂ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು. ಜಿಲ್ಲೆಯಲ್ಲಿ ನಡೆದ ನಾಲ್ಕು ಜನ ದಲಿತರ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು. ಇಲ್ಲದಿದ್ದರೆ ಗೃಹ ಸಚಿವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಛಲವಾದಿ ಮಹಾಸಭಾದ ರಾಜ್ಯ ನಿರ್ದೇಶಕ ಎಂ.ವಸಂತ ಕುಮಾರ, ಶಿವಕುಮಾರ, ಶರಣಪ್ಪ ನಂದಿಹಾಳ, ನಿರುಪಾದಿ ಸಾಸುಲಮಾರಿ, ಚಿನ್ನರಾಯುಡು ಮತ್ತಿತರರು ಉಪಸ್ಥಿತರಿದ್ದರು.






