Raichur | ಗುತ್ತಿಗೆ ಕಾರ್ಮಿಕರ ಕ್ರಮಬದ್ಧತೆಗೆ ಆಗ್ರಹ: ಆ.20ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ರಾಯಚೂರು: ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ ಹಾಗೂ ದಿನಗೂಲಿ ಪದ್ಧತಿಗಳನ್ನು ರದ್ದುಪಡಿಸಿ ಎಲ್ಲಾ ಕಾರ್ಮಿಕರನ್ನು ಕ್ರಮಬದ್ಧಗೊಳಿಸುವುದು, ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸುವುದು ಹಾಗೂ ಪ್ರತಿಯೊಬ್ಬ ಕಾರ್ಮಿಕನಿಗೂ ಪರಿಷ್ಕೃತ ಕನಿಷ್ಠ ವೇತನ ಪಾವತಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ವತಿಯಿಂದ ಆಗಸ್ಟ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ತಿಳಿಸಿದರು.
ರವಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರು ಉತ್ಪಾದನೆಯ ನಿಜವಾದ ಸೃಷ್ಟಿಕರ್ತರಾಗಿದ್ದರೂ ಬಡತನ, ಉದ್ಯೋಗದ ಅಭದ್ರತೆ ಹಾಗೂ ಶೋಷಣೆಯ ನಡುವೆ ಬದುಕುವಂತಾಗಿದೆ. ಗುತ್ತಿಗೆ ಮತ್ತು ಹೊರಗುತ್ತಿಗೆ ವ್ಯವಸ್ಥೆಯಿಂದ ಉದ್ಯೋಗ ಭದ್ರತೆ, ಶಾಸನಬದ್ಧ ವೇತನ ಹಾಗೂ ಸಾಮಾಜಿಕ ಭದ್ರತೆಯ ಹಕ್ಕುಗಳು ನಿರಾಕರಣೆಯಾಗುತ್ತಿವೆ ಎಂದು ಆರೋಪಿಸಿದರು.
ಒಂದೇ ರೀತಿಯ ಕೆಲಸ ನಿರ್ವಹಿಸುವ ಗುತ್ತಿಗೆ ಕಾರ್ಮಿಕರಿಗೆ ಖಾಯಂ ಕಾರ್ಮಿಕರಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ. ಇದು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಶೋಷಣಾತ್ಮಕ ವ್ಯವಸ್ಥೆಯಾಗಿದ್ದು, ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಕಾರ್ಮಿಕನಿಗೂ ತಿಂಗಳಿಗೆ ಕನಿಷ್ಠ 42 ಸಾವಿರ ರೂ. ವೇತನ ನಿಗದಿಪಡಿಸಬೇಕು. ಉದ್ಯೋಗ ಭದ್ರತೆ ಕಲ್ಪಿಸುವುದರ ಜೊತೆಗೆ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದು ಮೈತ್ರೇಯಿ ಕೃಷ್ಣನ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ್ ಪೂಜಾರ್, ಜಿಲ್ಲಾಧ್ಯಕ್ಷ ಅಜೀಜ್ ಜಾಗೀರ್ದಾರ್, ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಅಧ್ಯಕ್ಷ ಕೆ. ನಾಗಲಿಂಗ ಸ್ವಾಮಿ, ಖಾಲಿದ್ ಅಹ್ಮದ್, ವೀರಭದ್ರ ಹಾಗೂ ನಿಸಾರ್ ಉಪಸ್ಥಿತರಿದ್ದರು.






