ರಾಯಚೂರು ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ : ಪರೀಕ್ಷೆ ನಡೆಸಲು ಒತ್ತಾಯ

ಬೆಂಗಳೂರು : ರಾಯಚೂರು ಕೃಷಿ ವಿವಿಯಲ್ಲಿನ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಿಗದಿತ ದಿನಾಂಕಗಳಾದ ಜ.17 ಮತ್ತು ಜ.18ರಂದೇ ನಡೆಸಬೇಕು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಮಂಗಳವಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರಕಟನೆ ಹೊರಡಿಸಿದ್ದು, ರಾಯಚೂರು ಕೃಷಿ ವಿಶ್ವವಿದ್ಯಾಲಯವು 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ 2023ರ ಅ.18ರಂದು ಅಧಿಸೂಚನೆಯನ್ನು ಹೊರಡಿಸಿತ್ತು. ಈ 75 ಹುದ್ದೆಗಳಲ್ಲಿ ಹೊಸ ಮೀಸಲಾತಿ ರೋಸ್ಟರ್ ಬಿಂದುಗಳ ಅನುಗುಣವಾಗಿ, ಮೊದಲ ರೋಸ್ಟರ್ ಬಿಂದು ಪರಿಶಿಷ್ಟ ಜಾತಿಗೆ ಮತ್ತು ಮೂರನೇ ರೋಸ್ಟರ್ ಬಿಂದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಅಧಿಸೂಚನೆಯಲ್ಲಿ ವಿಷಯವಾರು ಹುದ್ದೆಗಳನ್ನು ವಿಂಗಡಿಸಿರುವುದರಿಂದ, ಪ್ರತಿ ವಿಷಯದ ಮೊದಲ ಮತ್ತು ಮೂರನೇ ಸ್ಥಾನಗಳು ಕ್ರಮವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಈ ರೀತಿ ಒಟ್ಟು 75 ಹುದ್ದೆಗಳಲ್ಲಿ 24 ಹುದ್ದೆಗಳು ಪರಿಶಿಷ್ಟ ಜಾತಿಗೆ ಹಾಗೂ 10 ಹುದ್ದೆಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಒಟ್ಟಾರೆ 34 ಹುದ್ದೆಗಳು ದಲಿತ ಸಮುದಾಯಕ್ಕೆ ಲಭಿಸುತ್ತಿವೆ ಎಂದು ತಿಳಿಸಿದ್ದಾರೆ.
ಈ ನೇಮಕಾತಿ ಅಧಿಸೂಚನೆ ಪ್ರಕಟವಾದ ದಿನದಿಂದಲೂ, 75 ಹುದ್ದೆಗಳಲ್ಲಿ 34 ಹುದ್ದೆಗಳು ದಲಿತರಿಗೆ ಮೀಸಲಾಗಿರುವುದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿವಿಧ ರೀತಿಯ ಷಡ್ಯಂತ್ರಗಳ ಮೂಲಕ ನೇಮಕಾತಿ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಾ ಬರುತ್ತಿದ್ದಾರೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಯನ್ನು 2025ರ ಫೆ.22ರಂದು ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಪರೀಕ್ಷೆಗೆ ಕೇವಲ ಒಂದು ವಾರ ಬಾಕಿಯಿದ್ದಾಗಲೇ ಮುಂದೂಡಲಾಯಿತು. ನಂತರ ಪರೀಕ್ಷೆಯನ್ನು 2025ರ ಮಾ.5 ಮರುನಿಗದಿಪಡಿಸಲಾಯಿತು. ಆದರೆ ಪರೀಕ್ಷೆಗೆ ಕೇವಲ 12 ಗಂಟೆಗಳು ಉಳಿದಿದ್ದಾಗ ಯಾವುದೇ ಸಮಂಜಸ ಕಾರಣವಿಲ್ಲದೆ ಮತ್ತೆ ಪರೀಕ್ಷೆಯನ್ನು ಮುಂದೂಡಲಾಯಿತು ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಈ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೈಕೋರ್ಟ್ ಈ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಪರೀಕ್ಷಾ ಪ್ರಕ್ರಿಯೆಗೆ ತಡೆ ನೀಡಿತು. ನಂತರ ವಾದ–ವಿವಾದಗಳನ್ನು ಆಲಿಸಿ 2025 ಆ.4ರಂದು ಅರ್ಜಿಯನ್ನು ವಜಾಗೊಳಿಸಿತು. ಅಧಿಸೂಚನೆ ಹಾಗೂ ನೇಮಕಾತಿ ಪ್ರಕ್ರಿಯೆ ಯುಜಿಸಿ ನಿಯಮಗಳ ಪ್ರಕಾರ ಸರಿಯಾಗಿದೆ ಎಂದು ಸ್ಪಷ್ಟ ತೀರ್ಪು ನೀಡಿತು ಎಂದು ಅಭ್ಯರ್ಥಿಗಳು ಹೇಳಿದ್ದಾರೆ.
ಈ ತೀರ್ಪಿನ ವಿರುದ್ಧ ಕಲಬುರಗಿ ಹೈಕೋರ್ಟ್‍ನ ದ್ವಿ ಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ದ್ವಿ ಸದಸ್ಯ ಪೀಠವೂ ಏಕ ಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದು, ನೇಮಕಾತಿ ಪ್ರಕ್ರಿಯೆ ಯುಜಿಸಿ ನಿಯಮಾನುಸಾರವೇ ಇದೆ ಎಂದು ಸ್ಪಷ್ಟಪಡಿಸಿತು ಎಂದು ಅಭ್ಯರ್ಥಿಗಳು ಮಾಹಿತಿ ನೀಡಿದ್ದಾರೆ.
ಈ ಎಲ್ಲ ಅಡೆತಡೆಗಳನ್ನು ಎದುರಿಸಿ, ನೇಮಕಾತಿ ಪರೀಕ್ಷೆಯ ದಿನಾಂಕವನ್ನು ಜ.17 ಮತ್ತು ಜ.18ರಂದು ನಿಗದಿಪಡಿಸಲಾಗಿದೆ. ಆದರೂ, ಇಲ್ಲಸಲ್ಲದ ಆರೋಪ ಹಾಗೂ ಸಂಚುಗಳ ಮೂಲಕ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗೆ ಮತ್ತೆ ಅಡ್ಡಿಪಡಿಸಲು ಪ್ರಯತ್ನಗಳು ಮುಂದುವರಿದಿದ್ದು, ವಿಶ್ವವಿದ್ಯಾಲಯವು ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಕಾನೂನು ತೀರ್ಪುಗಳನ್ನು ಮರೆಮಾಚಿ, ಆಧಾರರಹಿತ ಆರೋಪಗಳನ್ನು ಮಾಡುತ್ತಾ ಪರೀಕ್ಷಾ ಪ್ರಕ್ರಿಯೆ ಹಾಗೂ ನೇಮಕಾತಿಯನ್ನು ವಿಳಂಬಗೊಳಿಸುವ ಉದ್ದೇಶದಿಂದ ನಿರಂತರವಾಗಿ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. 75 ಹುದ್ದೆಗಳಲ್ಲಿ 34 ಹುದ್ದೆಗಳು ದಲಿತರಿಗೆ ಮೀಸಲಾಗಿರುವುದೇ ಈ ಅಡೆತಡೆಗಳ ಮೂಲ ಕಾರಣವಾಗಿದ್ದು, ಅಧಿಸೂಚನೆ ಹೊರಡಿಸಿ ಈಗಾಗಲೇ ಎರಡು ವರ್ಷಗಳು ಕಳೆದರೂ ನೇಮಕಾತಿ ಪೂರ್ಣಗೊಳ್ಳದಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಚು ರೂಪಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆರೋಪಿಸಿದ್ದಾರೆ.







