ರಾಯಚೂರು | ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಾಲ್‌ರನ್ನು ಅಮಾನತುಗೊಳಿಸಲು ಒತ್ತಾಯ

ರಾಯಚೂರು: ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ದೇವದರ್ಗ ತಾಲೂಕಿನ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಾಲ್‌ರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಒತ್ತಾಯಿಸಿ, ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಪತ್ರಿಕಾ ಮಾಧ್ಯಮದ ಮೇಲೆ ನಿರಂತರ ದಾಳಿ, ದೌರ್ಜನ್ಯ, ಅವಮಾನಗಳು ನಡೆಯುತ್ತಿವೆ. ಅದರ ಭಾಗವಾಗಿ ಜಿಲ್ಲೆಯ ಅರಕೇರ ಪಟ್ಟಣದಲ್ಲಿ ವರದಿಗೆ ತೆರಳಿದ್ದ ಪತ್ರಕರ್ತರನ್ನು ಅವಾಚ್ಯವಾಗಿ ನಿಂದಿಸಿದ ಘಟನೆ ಜರುಗಿದ್ದು ಖಂಡನೀಯವಾಗಿದೆ.
ಕೊತ್ತದೊಡ್ಡಿ ವಸತಿ ಶಾಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಗಳನ್ನು ಅರಕೇರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರು ವಿಡಿಯೋ, ಫೋಟೊ ಚಿತ್ರೀಕರಣ ಮಾಡುತ್ತಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಪ್ರಿನ್ಸಿಪಾಲ್ ಸುರೇಶ ವರ್ಮಾ ಮಾಹಿತಿ ಮತ್ತು ಚಿತ್ರ ಸಂಗ್ರಹಿಸಿದ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿ, ನಿಂದಿಸಿರುವುದು ಖಂಡನೀಯ ಎಂದು ತಿಳಿಸಿದರು.
ಮಾಧ್ಯಮ ಕ್ಷೇತ್ರವನ್ನು ಮನಬಂದಂತೆ ಹೀಯಾಳಿಸಿ, ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಾಲ್‌ರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು







