ರಾಯಚೂರು| ಹದ್ದಿನಾಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್.ಭೇಟಿ : ಭೂಮಾನಂದ ಕುಟುಂಬಕ್ಕೆ ಸಾಂತ್ವನ

ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ ಹತ್ಯೆಗೀಡಾದ ಬಿಎಸ್‌ಪಿ ಮುಖಂಡ ಹಾಗೂ ಹೋರಾಟಗಾರ ಭೂಮಾನಂದ ಹದ್ದಿನಾಳ ಅವರ ನಿವಾಸಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಕುಟುಂಬಕ್ಕೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದರು.
2026ರ ಆಗಸ್ಟ್ 5 ರಂದು ಸುಂಕೇಶ್ವರಹಾಳ ಗ್ರಾಮದ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಭೂಮಾನಂದ ಹದ್ದಿನಾಳ ಅವರನ್ನು ಹತ್ಯೆ ಮಾಡಿದ್ದರು.
ಈ ವೇಳೆ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಮಾತನಾಡಿ, ಭೂಮಾನಂದ ಅವರ ಮಕ್ಕಳ ಶಿಕ್ಷಣಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು. ಇದಲ್ಲದೆ ಭೂಮಾನಂದ ಅವರ ಪತ್ನಿಗೆ ಸರ್ಕಾರಿ ನೌಕರಿ ನೀಡುವ ಬಗ್ಗೆ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸುವಂತೆ ದೇವದುರ್ಗ ತಹಶಿಲ್ದಾರ್ ನಾಗಮ್ಮ ಕಟ್ಟಿಮನಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಇದೇ ಸಂದರ್ಭದಲ್ಲಿ ದೇವದುರ್ಗ ತಹಶಿಲ್ದಾರ್ ನಾಗಮ್ಮ ಕಟ್ಟಿಮನಿ, ದೇವದುರ್ಗ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ, ಗಬ್ಬೂರ ಪಿಎಸ್.ಐ ಅರುಣ್ ಕುಮಾರ್ ಸೇರಿದಂತೆ ಭೂಮಾನಂದ ಕುಟುಂಬಸ್ಥರು, ಊರಿನ ನಾಗರಿಕರು ಉಪಸ್ಥಿತರಿದ್ದರು.




