ರಾಯಚೂರು | ಪೊಲೀಸ್ ಠಾಣೆಯಲ್ಲಿ ಬಟ್ಟೆ ಬಿಚ್ಚಿ ಅವಮಾನ ಪ್ರಕರಣ : ಎನ್‌ಎಚ್‌ಆರ್‌ಸಿಯಿಂದ ಎಸ್‌ಪಿಗೆ ವರದಿ ಸಲ್ಲಿಸಲು ಆದೇಶ

ರಾಯಚೂರು, ಆ.29: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಕರೆತಂದ ವ್ಯಕ್ತಿಯೊಬ್ಬನನ್ನು ಬಟ್ಟೆ ಬಿಚ್ಚಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಮಾನವ ಹಕ್ಕುಗಳ ಆಯೋಗ ಸ್ಪಂದಿಸಿ ಪ್ರಕರಣವನ್ನು ಅ.20 ರೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಿದೆ.
ಲಿಂಗಸುಗೂರು ತಾಲೂಕಿನ ಮಾವಿನಬಾವಿ ಗ್ರಾಮದ ಅಮರೇಶ ಸಂಗಪ್ಪ ಅಂಬಿಗೇರ್ ಅವರು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದರು. ಬಳಿಕ ಯುವತಿಗೆ ಬೇರೆ ಕಡೆ ವಿವಾಹವಾಗಿತ್ತು. ಆದರೂ ಹುಡುಗಿ ಅಮರೇಶನಿಗೆ ಕಾಲ್ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆಸಿ ಬುದ್ದಿವಾದ ಹೇಳಿ ಎರಡು ಕುಟುಂಬದವರಿಗೆ ಸಂಧಾನ ಮಾಡಿ ಕಳುಹಿಸಿದ್ದರು. ಸಂದಾನದಲ್ಲಿಯೇ ಇತ್ಯರ್ಥವಾದ ಘಟನೆಯನ್ನು ಯಾರೂ ದೂರು ನೀಡದಿದ್ದರೂ ವಿಚಾರಣೆಗೆ ಎಂದು ಜೂ.20 ರಂದು ಅಮರೇಶ ಅಂಬಿಗೇರ್ ಅವರನ್ನು ಠಾಣೆಗೆ ಕರೆಸಿ ಬಟ್ಟೆ ಬಿಚ್ಚಿಸಿ ಅರೆ ಬೆತ್ತಲೆ ಕೂರಿಸಿ ಕಳಿಸಿದ್ದರು.
ಈ ಸಂದರ್ಭದಲ್ಲಿ ತನ್ನಿಂದ ಹಣ ವಸೂಲಿ ಮಾಡಿದ್ದು, ನನಗೆ ಜೀವ ಬೆದರಿಕೆ ಹಾಕಿ ಮುದಗಲ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ವೀರಭದ್ರಪ್ಪ, ಶರಣಪ್ಪ ಹಾಗೂ ರಾಮಪ್ಪ ಪ್ರತಿ ದಿನ ದೂರವಾಣಿ ಕರೆಗಳನ್ನು ಮಾಡಿ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಎಸ್ ಪಿ ಎಂ ಪುಟ್ಟಮಾದಯ್ಯ ಅವರಿಗೆ ಜು.21 ರಂದು ದೂರು ನೀಡಿದ್ದರು. ಒಂದು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಬಗ್ಗೆ ವಾರ್ತಾ ಭಾರತಿ ಪತ್ರಿಕೆ ಹಾಗೂ ವೆಬ್ ಸೈಟ್‌ನಲ್ಲಿ ಸುದ್ದಿ ಪ್ರಕಟಿಸಿತ್ತು. ಮಾನವ ಹಕ್ಕುಗಳ ಆಯೋಗಕ್ಕೆ ವಾರ್ತಾ ಭಾರತಿ ಪತ್ರಿಕೆಯ ತುಣುಕು ತಲುಪಿದ್ದರಿಂದ ದೂರು ದಾಖಲಿಸಿಕೊಂಡಿತ್ತು. ಈಗ ಎಸ್ ಪಿ ಅವರಿಗೆ ವರದಿ ನೀಡಲು ಆದೇಶ ಮಾಡಿದ್ದು ಈ ಬಗ್ಗೆ ತನಿಖೆ ನಡೆಸುತ್ತಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೂರವಾಣಿ ಸಂಪರ್ಕ ಮಾಡಿದಾಗ ತನಿಖೆ ನಡೆಯುತ್ತಿದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ಅಧಿಕಾರಿ ಪುಟ್ಟಮಾದಯ್ಯ ಅವರನ್ನು ಸಂಪರ್ಕಿಸಿದರೂ ಕರೆ ಸ್ವೀಕರಿಸಿಲ್ಲ.







