ರಾಯಚೂರು | ಸಿಪಿಐಎಂಎಲ್ ಲಿಬರೇಷನ್ ಪಕ್ಷದಿಂದ ಸಂವಿಧಾನ ಪೀಠಿಕೆ ಹಂಚಿಕೆ
ಸಂವಿಧಾನದ ಪೀಠಿಕೆ ಪ್ರತಿಜ್ಞಾ ವಿಧಿ ಬೋಧನೆ

ರಾಯಚೂರು : ಭಾರತದ ಗಣರಾಜ್ಯ 75ನೇ ವಾರ್ಷಿಕೋತ್ಸದ ಅಂಗವಾಗಿ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ಲಿಬರೇಷನ್ ಪಕ್ಷದ ವತಿಯಿಂದ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆ ಹಂಚಿಕೆ ಮಾಡಿ ಜಾಗೃತಿ ಮೂಡಿಸಲಾಯಿತು.
ಜ.26 ರಂದು ನಮ್ಮ ಗಣರಾಜ್ಯದ ಸ್ಥಾಪನೆಯ ಮತ್ತು ಸಂವಿಧಾನದ ಅನುಷ್ಠಾನದ 75ನೇ ವಾರ್ಷಿಕೋತ್ಸವದ ಅಂಗವಾಗಿ 'ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವʼದ ಘೋಷ ವಾಕ್ಯದ ಅಡಿಯಲ್ಲಿ ಜ.19ರಿಂದ 26ರವರೆಗೆ ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿಯಿಂದ ಆಯೋಜಿಸಿದ ಸಂವಿಧಾನ ಅಭಿಯಾನದ ಭಾಗವಾಗಿ ಇಂದು ಪಕ್ಷದ ಜಿಲ್ಲಾ ಸಮಿತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆ ಬೋಧನೆ ಮಾಡಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಯಿತು.
'ಸಂವಿಧಾನದಲ್ಲಿನ ಜಾತ್ಯತೀತ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಭಾರತದ ಐಕ್ಯತೆಯನ್ನು ಉಳಿಸಲು ಪ್ರಮುಖ ಪಾತ್ರವನ್ನು ವಹಿಸಿದೆ. ಸಂವಿಧಾನವನ್ನು ಅಪಮಾನಗೊಳಿಸುವುದನ್ನು ತಡೆಯಬೇಕಿದೆ. ಸಂವಿಧಾನದ ಪೀಠಿಕೆಯಲ್ಲಿರುವ ಸಾರ್ವಭೌಮ, ಸಾಮಾಜಿಕ, ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ಗಣರಾಜ್ಯವಾಗಿ ನಮಗೆ ನಾವೇ ಮಾಡಿಕೊಂಡಿರುವ ಪ್ರತಿಜ್ಞೆಯನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಮೇಲೆಯಿದೆ ಎಂದು ಸಂಘಟಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದನ್ನು ಖಚಿತಪಡಿಸುತ್ತದೆ. ಇದಲ್ಲದೆ, ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವವನ್ನು ಖಾತ್ರಿಪಡಿಸುವ ಮೂಲಕ ಪ್ರತಿಯೊಬ್ಬರಿಗೂ ಘನತೆಯನ್ನು ನೀಡುತ್ತದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಈ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದ್ದು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ದಾಳಿಗಳನ್ನು ತಡೆಯಲು ಹೋರಾಟ ಮಾಡುವ ಜವಾಬ್ದಾರಿ ನಮ್ಮದಾಗಿದೆ ಎಂದು ಪಕ್ಷದ ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಜಿಲ್ಲಾ ಮುಖಂಡರಾದ ಅಜೀಜ್ ಜಾಗೀರ್ದಾರ್, ಜಿಲಾನಿ ಯರಗೇರಾ, ಮಹಾಲಿಂಗ, ಮಹೇಂದ್ರ, ಹನೀಫ್ ಅಬಕಾರಿ, ಮೊಹಮ್ಮದ್ ಶಾಲಂ, ರವಿಚಂದ್ರ, ಸಾಮಾಜಿಕ ಕಾರ್ಯಕರ್ತರಾದ ಸಾಧಿಕ್ ಖಾನ್, ಮಾರೆಪ್ಪ ಹರವಿ ಉಪಸ್ಥಿತರಿದ್ದರು.







