Raichur | ಮಾರ್ಚ್ ಮಾಹೆಯ ಪಡಿತರ ಧಾನ್ಯ ವಿತರಣೆ: ಜಿಲ್ಲಾಧಿಕಾರಿ ನಿತೀಶ್ ಕೆ.

ನಿತೀಶ್ ಕೆ.
ರಾಯಚೂರು: ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮಾರ್ಚ್ 2026ರ ಪಡಿತರ ಧಾನ್ಯಗಳ ವಿತರಣೆ ಪ್ರಾರಂಭವಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ನಿತೀಶ್ ಕೆ. ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಪ್ರತಿ ಚೀಟಿಗೆ 35 ಕೆ.ಜಿ ಸಾರವರ್ಧಿತ ಅಕ್ಕಿ ವಿತರಿಸಲಾಗುತ್ತದೆ. ಪಿ.ಹೆಚ್.ಹೆಚ್ (BPL) ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ 5 ಕೆ.ಜಿ ಸಾರವರ್ಧಿತ ಅಕ್ಕಿ ನೀಡಲಾಗುತ್ತದೆ.
ಇದರ ಜೊತೆಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ, ಏಕ, ದ್ವಿ ಹಾಗೂ ತ್ರಿ ಸದಸ್ಯರ ಅಂತ್ಯೋದಯ ಚೀಟಿಗಳನ್ನು ಹೊರತುಪಡಿಸಿ, ನಾಲ್ಕು ಮತ್ತು ಹೆಚ್ಚು ಸದಸ್ಯರಿರುವ ಅಂತ್ಯೋದಯ ಹಾಗೂ ಪಿ.ಹೆಚ್.ಹೆಚ್ ಚೀಟಿದಾರರಿಗೆ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆಯಡಿ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ, ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದಲ್ಲಿ ಪಡಿತರ ನೀಡಿದರೆ, ಹಣ ಕೇಳಿದರೆ ಅಥವಾ ಇತರೆ ದೂರುಗಳಿದ್ದಲ್ಲಿ ನಿಶುಲ್ಕ ದೂರವಾಣಿ ಸಂಖ್ಯೆ 1967ಗೆ ಅಥವಾ ಸಂಬಂಧಿತ ತಹಶೀಲ್ದಾರರ ಕಚೇರಿ ಹಾಗೂ ಉಪನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಈ ಯೋಜನೆಯಡಿ ನೀಡಲಾಗುವ ಧಾನ್ಯಗಳನ್ನು ಮಾರಾಟ ಮಾಡುವುದು ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದರೆ, ಅಂತಹ ಪಡಿತರ ಚೀಟಿದಾರರಿಗೆ ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ವಿಧಿಸಿ, ಆ ಚೀಟಿಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.







