ರಾಯಚೂರು | ಗಣೇಶ ವಿಸರ್ಜನೆ ವೇಳೆ ದುರ್ಘಟನೆಗಳು ನಡೆಯದಂತೆ ಜಿಲ್ಲಾಡಳಿತಕ್ಕೆ ಸಹಕರಿಸಿ: ಜಿಲ್ಲಾಧಿಕಾರಿ ಪೂವಿತಾ ಎಸ್.

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಎಲ್ಲ ಗಜಾನನ ಮಂಡಳಿಯವರು ಪಾಲಿಸುವ ಮೂಲಕ ಶಾಂತಿಯುತ ಹಾಗೂ ಯಾವುದೇ ದುರ್ಘಟನೆಗಳ ನಡೆಯದಂತೆ ನೋಡಿಕೊಳ್ಳುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಿಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಹೇಳಿದರು.
ಸೆಪ್ಟೆಂಬರ್ 20ರ ರವಿವಾರದಂದು ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶ್ರೀ ಗೌರಿ ಗಣೇಶ ವಿಸರ್ಜನೆ ಕುರಿತು ನಡೆದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದುರ್ಘಟನೆ ನಡೆಯದಂತೆ ಸುಮಾರು ಮೂರು-ನಾಲ್ಕು ತಿಂಗಳಿಂದ ಎಲ್ಲರೂ ಕಷ್ಟಪಟ್ಟು ಒಳ್ಳೆಯ ರೀತಿಯಲ್ಲಿ, ಚೆನ್ನಾಗಿ ಮತ್ತು ಭಿನ್ನವಾಗಿ ಉತ್ಸವವನ್ನು ನಡೆಸಲು ಶ್ರಮಿಸುತ್ತಿದ್ದಾರೆ. ಆದರೆ ದುರ್ಘಟನೆಗಳು ಸಂಭವಿಸಿದಾಗ ಎಲ್ಲರ ಮನಸ್ಸಿಗೂ ನೋವಾಗುತ್ತದೆ. ವಿಸರ್ಜನಾ ಮೆರವಣಿಗೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಟ್ರಾಕ್ಟರ್‌ಗಳನ್ನು ಬಳಸುವಾಗ ಅವುಗಳಲ್ಲಿ ಉತ್ತಮ ಡ್ರೈವರ್‌ಗಳನ್ನು ಹಾಕಿ, ಒಂದಕ್ಕಿಂತ ಹೆಚ್ಚು ಗಣಪತಿಯನ್ನು ಅದರ ಮೇಲೆ ಕೂರಿಸಬಾರದು ಎಂದು ಸಂಬಂಧಿಸಿದ ಗಣೇಶ ಮಂಡಳಿಯವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಆರ್.ಟಿ.ಒ. ಹಾಗೂ ಸಾರಿಗೆ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪೊಲೀಸ್ ಇಲಾಖೆ ಹಾಗೂ ಕಾರ್ಪೊರೇಷನ್ ಇಲಾಖೆಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ದಯವಿಟ್ಟು ಯುವಕರು ಟ್ರಾಕ್ಟರ್ ಸುತ್ತಮುತ್ತ ಓಡಾಡುವುದು, ಮೆರವಣಿಗೆಯಲ್ಲಿ ಜೊತೆಯಾಗಿ ಸಾಗುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಮಕ್ಕಳನ್ನು ವಿಸರ್ಜನೆಗೆ ಕರೆದುಕೊಂಡು ಹೋಗುವಾಗ ಅವರ ಸುರಕ್ಷತೆಗೆ ಆದ್ಯತೆ ನೀಡಬೇಕು. ಸೌಂಡ್ ಸಿಸ್ಟಮ್ ಬಳಕೆಯಲ್ಲಿ ಸಾಮಾನ್ಯ ಸಮಯದಲ್ಲೂ ನಿಯಮಗಳನ್ನು ಪಾಲಿಸಬೇಕು. ಅತಿಯಾದ ಶಬ್ದದಿಂದ ವಯಸ್ಸಾದವರಿಗೆ ಮತ್ತು ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸಂಸ್ಕೃತಿ ಮತ್ತು ಕಲಾ ಪ್ರಕಾರಗಳಿಗೆ ತೊಂದರೆಯಾಗದಂತೆ, ಭಜನೆಗಳು ಮತ್ತು ಲೈಟ್ ಮ್ಯೂಸಿಕ್ ಮೂಲಕ ಉತ್ಸವವನ್ನು ಶಾಂತಿಯುತವಾಗಿ ನಡೆಸಬೇಕು ಎಂದರು.
ಗಣೇಶ ವಿಸರ್ಜನೆಗಾಗಿ ರಾಯಚೂರಿನ ಕಾಸಭಾವಿಗೆ ಹೋದಾಗ ಜನರನ್ನು ಒಳಗೆ ಬಿಡದಂತೆ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಹಿಂದೆ ಕಾಲು ಜಾರಿ ಒಬ್ಬರು ಒಳಗೆ ಬಿದ್ದ ಘಟನೆ ನಡೆದಿದೆ. ಕಾರ್ಪೊರೇಷನ್ ವತಿಯಿಂದ ಗಣಪತಿಗಳನ್ನು ಕ್ರೈನ್ ಮೂಲಕ ಅಥವಾ ನಿಗದಿತ ರೀತಿಯಲ್ಲಿ ಮಾತ್ರ ವಿಸರ್ಜನೆ ಮಾಡಬೇಕು. ಅಲ್ಲದೆ ರಾತ್ರಿ 11 ಗಂಟೆಯ ನಂತರ ಬ್ಯಾರಿಕೇಡ್ ದಾಟಿ ಯಾರೂ ಮುಂದೆ ಹೋಗದಂತೆ ಎಚ್ಚರವಹಿಸಬೇಕು ಎಂದರು.
ಈ ವೇಳೆ ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹೊಪಾತ್ರ ಅವರು ಮಾತನಾಡಿ, ಕುಡಿದುಕೊಂಡು ಯಾವುದೇ ಕಾರಣಕ್ಕೂ ಟ್ರ್ಯಾಕ್ಟರ್, ಆಟೋ, ಕಾರು ಚಲಾಯಿಸಬಾರದು ಅಥವಾ ವಿಸರ್ಜನಾ ಸ್ಥಳಗಳಿಗೆ ಬರಬಾರದು. ಕಳೆದ ಒಂದು ವಾರದಿಂದ ನಿರಂತರವಾಗಿ ಕಾರ್ಪೊರೇಷನ್ ವತಿಯಿಂದ ಮೈಕ್ ಸಿಸ್ಟಮ್ ಯೂಸ್ ಮಾಡಿ ಅನೌನ್ಸ್ಮೆಂಟ್ಸ್ ಮಾಡ್ತಾ ಇದ್ದೀವಿ. ಕೆಲವರು ಕಾರ್ಪೊರೇಷನ್ ಸಿಬ್ಬಂದಿ ಜೊತೆ ಕೆಟ್ಟ ವರ್ತನೆ ಮಾಡೋದು ಕಂಡುಬಂದಿದೆ. ದಯವಿಟ್ಟು ಸರ್ಕಾರಿ ಸಿಬ್ಬಂದಿಗಳೊಂದಿಗೆ ಗಲಾಟೆ ಮಾಡಬಾರದು. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸಬೇಕು ಎಂದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ಮಾತನಾಡಿ, ಜನರು ಹೆಲ್ಮೆಟ್ ಧರಿಸಬೇಕು. ತಮ್ಮ ಪ್ರಾಣಕ್ಕೆ ಬೆಲೆ ಕೊಡದೆ ಹೋದರೆ ಬೇರೆಯವರ ಪ್ರಾಣಕ್ಕೆ ಹೇಗೆ ಬೆಲೆ ಕೊಡಲು ಸಾಧ್ಯ. ಹೆಲ್ಮೆಟ್ ಹಾಕದೆ, ಗಾಡಿಯನ್ನು ವೇಗವಾಗಿ ಚಲಾಯಿಸಬಾರದು. ಇತ್ತೀಚೆಗೆ ಸಿಂಧೂರಿನಲ್ಲಿ ಅತ್ಯಂತ ಉತ್ತಮವಾಗಿ ಗಣೇಶ ವಿಸರ್ಜನೆ ಮಾಡಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯ ಎಲ್ಲ ಕಡೆ ವಿಸರ್ಜನೆ ಮಾಡಬೇಕು. ಗಜಾನನ ಮಂಡಳಿಯವರು ಸರಿಯಾದ ಸಮಯಕ್ಕೆ ಧ್ವನಿವರ್ಧಕಗಳನ್ನು ಬಂದ್ ಮಾಡಬೇಕು. ಅಲ್ಲದೆ ಎಲ್ಲರೂ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.
ಗಣೇಶ ವಿಸರ್ಜನೆ ವೇಳೆಯಲ್ಲಿ ಡಿಜೆ ಬಳಕೆಯಿಂದಾಗಿ ಮಕ್ಕಳು, ವೃದ್ಧರು, ಆಸ್ಪತ್ರೆಗಳಿಗೆ ಯಾವುದೇ ರೀತಿಯ ತೊಂದರೆ ಅಥವಾ ಪರಿಣಾಮ ಉಂಟಾಗದಂತೆ ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣ ಸಹಕರಿಸುವಂತೆ ವಿವಿಧ ಗಜಾನನ ಮಂಡಳಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ್, ರಾಯಚೂರು ಡಿವೈಎಸ್ಪಿ ಶಾಂತಮೂರ್ತಿ, ರಾಯಚೂರು ತಹಶಿಲ್ದಾರ್ ಸುರೇಶ ವರ್ಮಾ, ಜೋನಲ್ ಆಯುಕ್ತ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗಜಾನನ ಮಂಡಳಿಯ ಪದಾಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು ಸಭೆಯಲ್ಲಿ ಇದ್ದರು.






