18ರಂದು ರಾಯಚೂರು ಜಿಲ್ಲಾ ಅಂತರ್ ಶಾಲಾ ವಿಜ್ಞಾನ ಮೇಳ

ರಾಯಚೂರು: ಎಜೆ ಅಕಾಡೆಮಿ ಫಾರ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಸಂಸ್ಥೆಯ ವತಿಯಿಂದ ರಾಯಚೂರಿನ ಗಾಲಿಬ್ ಮೆಮೊರಿಯಲ್ ಟ್ರಸ್ಟ್ ಗ್ರಂಥಾಲಯದಲ್ಲಿ ಅಕ್ಟೋಬರ್ 18 ರಂದು ರಾಯಚೂರು ಜಿಲ್ಲಾ ಅಂತರ್‌ಶಾಲಾ ವಿಜ್ಞಾನ ಮೇಳ ಆಯೋಜಿಸಲಾಗಿದ್ದು, ಜೊತೆಗೆ ಜಿಲ್ಲಾ ಮಟ್ಟದ ಶಿಕ್ಷಕ ಶಿಕ್ಷಕಿಯರ ತರಬೇತಿ ಕಾರ್ಯಗಾರವನ್ನು ನೆಡೆಯಲಿದೆ ಎಂದು ಸಿಂಧನೂರಿನ ನೋಬಲ್ ಟೆಕ್ನೊ ಶಾಲೆಯ ಸಂಸ್ಥಾಪಕ ಹಾಗೂ ಎ.ಜೆ ಅಕಾಡೆಮಿಯ ಕಾರ್ಯಕ್ರಮ ಸಂಯೋಜಕ ಸೈಯದ್ ತನ್ವೀರ್ ತಿಳಿಸಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಎ ಜೆ ಅಕಾಡೆಮಿ ಫಾರ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ 4ನೇ ತರಗತಿಯಿಂದ 10ನೇ ತರಗತಿಯ ರಾಯಚೂರು, ಮಾನ್ವಿ, ಸಿಂಧನೂರು,ಮಸ್ಕಿ, ಲಿಂಗಸಗೂರು ಹಾಗೂ ದೇವದುರ್ಗ ವಿದ್ಯಾರ್ಥಿಗಳಿಗಾಗಿ ಈ ವಿಜ್ಞಾನ ಮೇಳ ಹಮ್ಮಿಕೊಂಡಿದ್ದು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ವಿಜ್ಞಾನ ಮತ್ತು ಗಣಿತ ಶಿಕ್ಷರಿಗೆ ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಈ ಮೇಳದಲ್ಲಿ ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಪರಿಸರ ವಿಜ್ಞಾನ ವಿಭಾಗಗಳ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ತಜ್ಞರ ಸಮಿತಿಯು ಅತ್ಯುತ್ತಮ ಪ್ರಾಜೆಕ್ಟ್‌ಗಳನ್ನು ಆಯ್ಕೆಮಾಡಿ ವಿದ್ಯಾರ್ಥಿಗಳಿಗೆ Budding Scientist, Emerging Scientist ಮತ್ತು Young Scientist ಎಂಬ ಗೌರವ ಬಿರುದುಗಳನ್ನು ನೀಡಿ ಸನ್ಮಾನಿಸಲಿದ್ದಾರೆ. ವೈಯಕ್ತಿಕ ಮತ್ತು ಗುಂಪು ಪ್ರಾಜೆಕ್ಟ್‌ಗಳಿಗೆ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.
ಎಜೆ ಅಕಾಡೆಮಿ ಫಾರ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಸಂಸ್ಥೆ ತನ್ನ ಸ್ಥಾಪನೆಯಿಂದಲೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಂಶೋಧನಾ ಚಿಂತನೆ ಮತ್ತು ವಿಚಾರಾಧಾರಿತ ಕಲಿಕೆ ಬೆಳೆಸುವ ನಿಟ್ಟಿನಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದೆ. 2018ರಿಂದ ಪ್ರತಿ ವರ್ಷ ವಿಜ್ಞಾನ ಮೇಳವನ್ನು ಯಶಸ್ವಿಯಾಗಿ ರಾಯಚೂರಿನಲ್ಲಿ ಆಯೋಜಿಸಲಾಗುತ್ತಿದೆ.
ರಾಯಚೂರು ಮಾತ್ರವಲ್ಲದೆ ಮಂಗಳೂರು, ಉಡುಪಿ, ಬೀದರ್ ಬಳ್ಳಾರಿ ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟ್ರ ಗೋವಾ ರಾಜ್ಯಗಳಲ್ಲಿ ಇಂತಹ ವಿಜ್ಞಾನ ಮೇಳವನ್ನು ಹಮ್ಮಿಕೊಂಡಿದೆ ಎಂದರು.
ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪ್ರಶ್ನೆ ಕೇಳುವ, ಪ್ರಯೋಗ ಮಾಡುವ, ಸಂಶೋಧನೆ ಮಾಡುವ ವಾತಾವರಣ ಸಿಕ್ಕಾಗ, ಅವರಲ್ಲಿ ಹೊಸ ಆವಿಷ್ಕಾರಗಳು ಹುಟ್ಟುತ್ತವೆ. ನಾವು ಶಿಕ್ಷಣದಲ್ಲಿ ಸಂಶೋಧನೆಗೆ ಆದ್ಯತೆ ನೀಡಿದರೆ, ಮುಂದಿನ ನೊಬೆಲ್ ವಿಜೇತ ರಾಯಚೂರು ಜಿಲ್ಲೆಯ ಶಾಲೆಯಿಂದಲೇ ಹೊರಬರಬಹುದು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ವಿಜ್ಞಾನ ಪ್ರದರ್ಶನ ಮಾರ್ಗದರ್ಶಿ ಕೈಪಿಡಿ ಪುಸ್ತಕಗಳನ್ನು ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ವಿತರಿಸಲಾಗುತ್ತದೆ. ರಾಯಚೂರು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಆಹ್ವಾನ ಕಳುಹಿಸಲಾಗಿದೆ. ಯಾವ ಶಾಲೆಗೆ ಆಹ್ವಾನ ತಲುಪದಿದ್ದರೂ, ಈ ಪತ್ರಿಕಾ ಪ್ರಕಟಣೆಯನ್ನೇ ಅಧಿಕೃತ ಆಹ್ವಾನವಾಗಿ ಪರಿಗಣಿಸಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಏ ಜೆ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ಅಬ್ದುಲ್ಲಾ ಜಾವೇದ್, ಸಂಯೋಜಕ ಎಂ ಎ ಎಚ್ ಮುಖೀಮ್ ಹಾಗೂ ಸಾದ್ ಮನಿಯಾರ್ ಉಪಸ್ಥಿತರಿದ್ದರು.







