ರಾಯಚೂರು ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ

ರಾಯಚೂರು, ಜ. 7: ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಕಡ್ಡಾಯವಾಗಿ ನಿರ್ವಹಣೆ ಆಗಲೇಬೇಕಾದ ನೌಕರರ ಹಾಜರಾತಿ ವಹಿ, ಚಲನವಹಿ, ನಗದು ವಹಿಗಳನ್ನು ಸರಿಯಾಗಿ ನಿರ್ವಹಿಸದೆ ಲೋಪ ಎಸಗುತ್ತಿರುವುದು ಕಂಡುಬಂದಿದೆ ಎಂದು ಕರ್ನಾಟಕ ಲೋಕಾಯುಕ್ತರ ಕಾರ್ಯದರ್ಶಿ ಶ್ರೀನಾಥ ಕೆ. ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಾ ತಂಡವು ಕಾರ್ಯಾಚರಣೆ ವೇಳೆ ಗಮನಿಸಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುತಿನ ಚೀಟಿ ಧರಿಸದೇ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಗ್ರೂಪ್ ಡಿ ಸೇರಿದಂತೆ ಬೇರೆ ಬೇರೆ ಸಿಬ್ಬಂದಿಗೆ ನಿಗದಿಪಡಿಸಿದ ಡ್ರೆಸ್ ಕೋಡ್ ಪಾಲನೆಯಾಗಿಲ್ಲ. ಕಚೇರಿಗೆ ಹೋದಾಗ ಯಾರು ಏನು ಎಂದು ತಿಳಿಯುವುದಿಲ್ಲ. ಬಹುತೇಕ ಕಚೇರಿಗಳಲ್ಲಿ ನೇಮ್ ಪ್ಲೇಟ್ ಕಾಣಿಸಲಿಲ್ಲ. ಇದು ಕೂಡಲೇ ಸರಿಯಾಗಬೇಕು. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಲೋಕಾಯುಕ್ತ ಅಧಿಕಾರಿಗಳ ಮಾಹಿತಿಯ ಫಲಕಗಳನ್ನು ಬಹುತೇಕ ಕಚೇರಿಗಳಲ್ಲಿ ಅಳವಡಿಸಿಲ್ಲ. ಸರಕಾರಿ ನೌಕರರಿಗೆ ಅನ್ವಯಿಸುವ ಎಲ್ಲ ನಿಯಮಗಳು ಹೊರಗುತ್ತಿಗೆ ನೌಕರರಿಗೂ ಅನ್ವಯಿಸುತ್ತವೆ. ಆದಾಗ್ಯೂ ಹೊರಗುತ್ತಿಗೆ ನೌಕರರ ಹಾಜರಾತಿ ವಹಿಯನ್ನು ಬಹುತೇಕ ಕಚೇರಿಗಳಲ್ಲಿ ನಿರ್ವಹಣೆ ಮಾಡಿಲ್ಲ ಎಂದು ಶ್ರೀನಾಥ ಬೇಸರ ವ್ಯಕ್ತಪಡಿಸಿದರು.
ಜ. 2ರಿಂದ ಜ. 7ರವರೆಗೆ ರಾಯಚೂರು ಜಿಲ್ಲೆಯ ವಿವಿಧೆಡೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕಂಡುಬಂದ ಲೋಪಗಳಿಗೆ ಸಂಬಂಧಿಸಿದಂತೆ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿ ಗಳಿಂದ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್, ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕ ಎ.ವಿ.ಪಾಟೀಲ, ರಾಯಚೂರು ಜಿಲ್ಲಾ ಕರ್ನಾಟಕ ಲೋಕಾಯುಕ್ತದ ಅಧೀಕ್ಷಕ ಸತೀಶ್ ಎಸ್ ಚಿಟಗುಬ್ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಲೋಕಾಯುಕ್ತದ ಡಿವೈಎಸ್ಪಿ ರವಿ ಪುರುಷೋತ್ತಮ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







