ರಾಯಚೂರು | ಎಲ್ಲಾ ವಾರ್ಡ್‌ನಲ್ಲಿ ಕುಡಿಯುವ ನೀರಿನ ಪರೀಕ್ಷೆ ನಿಯಮಿತವಾಗಿ ನಡೆಸಬೇಕು: ಜುಬಿನ್ ಮೊಹಾಪತ್ರ

ರಾಯಚೂರು: ಸಾರ್ವಜನಿಕರಿಗೆ ಗುಣಮಟ್ಟದ ಯೋಗ್ಯವಾದ ನೀರನ್ನು ಪೂರೈಸುವುದು ಮಹಾನಗರ ಪಾಲಿಕೆಯ ಮಹತ್ವದ ಕಾರ್ಯವಾಗಿದೆ. ಇದನ್ನು ಮನದಲ್ಲಿಟ್ಟುಕೊಂಡು ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಕುಡಿಯುವ ನೀರಿನ ಪರೀಕ್ಷೆಯ ಕಾರ್ಯವನ್ನು ನಿಯಮಿತವಾಗಿ ನಡೆಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಾಪತ್ರ ಅವರು ಹೇಳಿದರು.
ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜು ಸಿಬ್ಬಂದಿಗೆ ನೀರು ಪರೀಕ್ಷೆಯ ಕಿಟ್ ಮೂಲಕ ವಾರ್ಡ್ ಮಟ್ಟದಲ್ಲಿ ನೀರನ್ನು ಪರೀಕ್ಷಿಸುವ ವಿಧಾನದ ಬಗ್ಗೆ ತಿಳಿಸಲು ವಲಯ ಕಚೇರಿಯ ಸಭಾಂಗಣದಲ್ಲಿ ಜು.19ರಂದು ನಡೆದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಅಶುದ್ಧವಾದ ನೀರನ್ನು ಕುಡಿಯುವುದರಿಂದಲೇ ಬಹುತೇಕ ಕಾಯಿಲೆಗಳು ಒಕ್ಕರಿಸುತ್ತವೆ. ಶುದ್ಧವಾದ ನೀರನ್ನು ಕುಡಿದಾಗ ಮಾತ್ರ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ನಗರದ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದಾಗಿ ಶುದ್ಧವಾದ ಕುಡಿಯುವ ನೀರನ್ನು ಪೂರೈಸಬೇಕು. ನೀರನ್ನು ಸ್ಥಾನಿಕವಾಗಿ ಸಂಗ್ರಹಿಸಿ ಎಫ್‌ಟಿಕೆ ಕಿಟ್‌ಗಳನ್ನು ಬಳಸಿ, ಪರೀಕ್ಷಿಸಿ ನೀರು ಕುಡಿಯಲು ಯೋಗ್ಯವಿದೆ ಎಂಬುದರ ಬಗ್ಗೆ ವರದಿ ಪಡೆದುಕೊಂಡೇ ನೀರು ಸರಬರಾಜು ಮಾಡಬೇಕು. ಈ ಕಾರ್ಯವು ಇನ್ನು ಮುಂದೆ ಪ್ರತಿ ವಾರ್ಡಿನಲ್ಲಿ ನಿಯಮಿತವಾಗಿ ನಡೆಯಬೇಕು ಎಂದು ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾರ್ಯಗಾರದಲ್ಲಿ ಪಾಲಿಕೆಯ ಉಪ ಆಯುಕ್ತರಾದ ಮೇನಕಾ ಪಟೇಲ್, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಮಹೇಶ್ ಕುಮಾರ್ ಮತ್ತು ಎಲ್ಲಾ ಎಂಜಿನಿಯರು ಉಪಸ್ಥಿತರಿದ್ದರು.







