ಜೂ.28, 29ರಂದು ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಜಯದೇವಿ ಗಾಯಕವಾಡ ಆಯ್ಕೆ

ರಾಯಚೂರು : ಜೂ.28 ಮತ್ತು 29 ರಂದು ರಾಯಚೂರಿನಲ್ಲಿ ಆಯೋಜಿಸಿರುವ 11 ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಡಾ.ಜಯದೇವಿ ಗಾಯಕವಾಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದಸಾಪ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕತೆ ಮತ್ತು ಮಹಿಳಾ ಪ್ರಾತಿನಿದಿಕತೆ, ಸಾಹಿತ್ಯ ಸಾಧನೆಯನ್ನು ಪರಿಗಣಿಸಿ ದಸಾಪ ರಾಜ್ಯ ಕಾರ್ಯಕಾರಿ ಸಮಿತಿಯು ಈ ಭಾಗದ ಮಹಿಳಾ ಸಾಹಿತಿಯಾಗಿರುವ ಡಾ.ಜಯದೇವಿ ಗಾಯಕವಾಡ ಅವರನ್ನು ಆಯ್ಕೆಮಾಡಿದೆ ಎಂದರು.
ಸಂವಿಧಾನ ಭಾರತ ಎನ್ನುವ ಪ್ರಧಾನ ಆಶಯದಡಿ ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳದಲ್ಲಿ ಆಶಯದಂತೆಯೇ ಚರ್ಚೆ, ಸಂವಾದಗಳು, ಕವಿಗೋಷ್ಠಿಗಳನ್ನು ರೂಪಿಸಲಾಗಿದೆ ಎಂದರು.
ಸಮ್ಮೇಳನವನ್ನು ಚಿಂತಕ, ಸಾಹಿತಿ ಪ್ರೊ.ಬರಗೂರು ರಾಮಚಂದ್ರ ಅವರು ಉದ್ಘಾಟಿಸಲಿದ್ದು, ಸಾಹಿತಿ ಡಾ.ಎಲ್.ಹನುಮಂತಯ್ಯ ಆಶಯ ನುಡಿಗಳನ್ನಾಡಲಿದ್ದಾರೆ. ದಸಾಪ ಪುಸ್ತಕಗಳನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ ಬಿಡುಗಡೆಗೊಳಿಸಲಿದ್ದು, ಸಾಹಿತಿ ಕುಂವೀ ಅವರು ದಸಾಪ ನೀಡುವ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದಲ್ಲಿ ಎರಡು ಕವಿಗೋಷ್ಠಿಗಳನ್ನು ಸಂಯೋಜಿಸಲಾಗಿದ್ದು, ಒಂದು ಮಹಿಳಾ ಕವಿಗೋಷ್ಠಿ, ಸರ್ವರಿಗೂ ಸಂವಿಧಾನ, ಮೀಸಲಾತಿ ಒಳಗೆ-ಹೊರಗೆ ಎಂಬ ವಿಷಯಗಳ ಕುರಿತ ಎರಡೂ ಸಂವಾದ ಗೋಷ್ಠಿಗಳು, ರಾಯಚೂರು ಜಿಲ್ಲೆಯ ದಲಿತ ಬಂಡಾಯ ಸಾಹಿತ್ಯ ಹಾಗೂ ದಲಿತ ಲೋಕದ ವರ್ತಮಾನ ವಿಷಯಗಳ ಕುರಿತು ಸಂಕೀರ್ಣಗೋಷ್ಠಿಯನ್ನು ನಡೆಸಲಾಗುತ್ತಿದೆ. ಇದರೊಟ್ಟಿಗೆ ಚಿತ್ರಕಲಾ ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಸಾಪ ಪದಾಧಿಕಾರಿಗಳಾದ ಡಾ.ವೈ.ಎಂ.ಭಜಂತ್ರಿ, ಡಾ.ಎಚ್.ಬಿ.ಕೋಲ್ಕಾರ,ಸುಭಾಸ ಹೊದ್ಲೂರ, ತಾಯರಾಜ ಮರ್ಚೇಟ್ಹಾಳ, ಡಾ.ಹುಸೇನಪ್ಪ ಅಮರಾಪುರ, ಧರ್ಮಾವತಿ, ಪಾರ್ಥ ಸಿರವಾರ, ರಂಗಮುನಿದಾಸ ಸೇರಿ ಇತರರು ಇದ್ದರು.