Raichur | ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ವರ್ಗಾವಣೆಗೆ ಡಿಎಸ್ಎಸ್ ಈರಣ್ಣ ಖಂಡನೆ

ರಾಯಚೂರು: ಮಹಾನಗರ ಪಾಲಿಕೆಯ ದಕ್ಷ ಮತ್ತು ಕರ್ತವ್ಯನಿಷ್ಠ ಆಯುಕ್ತರಾದ ಜುಬೇನ್ ಮೊಹಪಾತ್ರ ಅವರನ್ನು ಅವಧಿ ಪೂರ್ವವೇ ವರ್ಗಾವಣೆ ಮಾಡಿದ್ದು ಬೇಸರ ಮೂಡಿಸಿದೆ ಎಂದು ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ಮಾರ್ಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಈರಣ್ಣ ಇವರು ಖಂಡಿಸಿದ್ದಾರೆ. ತಕ್ಷಣ ಇವರ ವರ್ಗಾವಣೆ ರದ್ದುಗೊಳಿಸಿ ರಾಯಚೂರಲ್ಲಿ ಮುಂದುವರಿಸದಿದ್ದರೆ ರಾಯಚೂರು ನಗರದಲ್ಲಿ ಜನರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉತ್ತಮ ಕೆಲಸ ಮಾಡುವಾಗಲೇ, ಕೆಲವರಿಗೆ ಹೊಟ್ಟೆ ಉರಿಯಾಗಿ ಇವರ ವರ್ಗಾವಣೆಗೆ ಜಾಲ ಬೀಸಿದಂತೆ ಕಾಣುತ್ತಿದೆ. ಜುಬೇನ್ ಅವರು ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಪಾಲಿಕೆಗೆ ಹೊಸ ಕಳೆ, ಹೊಸ ರೂಪ ನೀಡಿದ್ದಾರೆ. ರಾಯಚೂರು ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ತ್ಯಾಜ್ಯ ನಿರ್ವಹಣಾ ಘಟಕವನ್ನು ಸಮರ್ಥವಾಗಿ ನಡೆಯುವಂತೆ ಮಾಡಿದ್ದಾರೆ. ರಸ್ತೆ ಮೇಲಿನ ಸ್ವಚ್ಛತೆ ಧೂಳು ಮುಕ್ತ ಕೊಳೆಮುಕ್ತ ಮಾಡುವಲ್ಲಿ ಯಂತ್ರಗಳನ್ನು ಬಳಸುವ ಮೂಲಕ ರಸ್ತೆಗಳು ಸ್ವಚ್ಛವಾಗಿ ಕಂಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರು ತೀರಾ ಹಿಂದುಳಿದ ಪ್ರದೇಶವಾಗಿದ್ದು ದಕ್ಷ ಅಧಿಕಾರಿಗಳು ಸಿಗುವುದೇ ಕಷ್ಟ ಎಂಬಂತಾಗಿದೆ. ಇಂತಹ ಅಧಿಕಾರಿ ವರ್ಗಾವಣೆ ಇಡೀ ರಾಯಚೂರು ಜಿಲ್ಲೆಯ ಜನತೆಗೆ ಬೇಸರ ಮತ್ತು ಆಕ್ರೋಶ ತಂದಿದೆ. ತಕ್ಷಣ ವರ್ಗಾವಣೆ ಆದೇಶ ರದ್ದು ಮಾಡದಿದ್ದರೆ ಮಹಾನಗರ ಪಾಲಿಕೆ ಮುಂದೆ ಜನರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.




