Raichur | ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸಿ: ಎಂ.ಪ್ರಭಾಕರ್

ರಾಯಚೂರು: ಕೃಷಿ ವಿಜ್ಞಾನ ಕೇಂದ್ರಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ಐಸಿಎಆರ್) ಅಟಾರಿ ನಿರ್ದೇಶಕ ಎಂ.ಪ್ರಭಾಕರ್ ಸಲಹೆ ನೀಡಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನ.19 ಮತ್ತು 20ರಂದು ಆಯೋಜಿಸಿದ್ದ ರಾಯಚೂರು, ಧಾರವಾಡ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗಳ ವ್ಯಾಪ್ತಿಯ 16 ಕೃಷಿ ವಿಜ್ಞಾನ ಕೇಂದ್ರಗಳ ಮಧ್ಯಂತರ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹವಾಮಾನ ವೈಪರೀತ್ಯ ಹಾಗೂ ಬರ ಪರಿಸ್ಥಿತಿಯನ್ನು ಎದುರಿಸಲು ರೈತರಿಗೆ ವಿಜ್ಞಾನಿಗಳು ನೆರವಾಗಬೇಕು. ಎಲ್‌ನಿನೊ ಪರಿಣಾಮದಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿನ ಪ್ರಗತಿ ಪರಿಶೀಲಿಸಿ, ಹಿಂಗಾರು ಹಂಗಾಮಿನ ಗುರಿ ನಿಗದಿಪಡಿಸುವುದು ಸಭೆಯ ಉದ್ದೇಶವಾಗಿದೆ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಗುರುರಾಜ್ ಸುಂಕದ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರಗಳ ಕಾರ್ಯಕ್ಷಮತೆ ಹೆಚ್ಚಿಸುವುದರ ಜೊತೆಗೆ ರೈತರಿಗೆ ಸುಧಾರಿತ ತಂತ್ರಜ್ಞಾನ ತಲುಪಿಸಲು ಆದ್ಯತೆ ನೀಡಬೇಕು ಎಂದರು.
ವಿಸ್ತರಣಾ ನಿರ್ದೇಶಕ ಎ.ಆರ್. ಕುರುಬರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿಯೇ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ವಿಜೇತ ಕೃಷಿ ವಿಜ್ಞಾನ ಕೇಂದ್ರಗಳನ್ನು ಹೊಂದಿರುವ ಮೊದಲ ವಿಶ್ವವಿದ್ಯಾಲಯ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವಾಗಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ರೈತರ ಸಬಲೀಕರಣಕ್ಕಾಗಿ ವಿಸ್ತರಣಾ ನಿರ್ದೇಶನಾಲಯದ ವತಿಯಿಂದ ರೈತ ಸಂತೆ, ನಮ್ಮ ಹೆಮ್ಮೆಯ ರೈತ, ರೈತರೊಂದಿಗೆ ಒಂದು ದಿನ, ಡಿಜಿಟಲ್ ವೇದಿಕೆಗಳು ಹಾಗೂ ಸಮುದಾಯ ಬಾನುಲಿ ಕೇಂದ್ರದಂತಹ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
ಎರಡು ದಿನಗಳ ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು ಮುಂಗಾರು ಹಂಗಾಮಿನ ಪ್ರಗತಿ, ಹಿಂಗಾರು ಹಂಗಾಮಿನ ಗುರಿ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ಡಾ. ಗಂಗಾಧರ, ಡಾ. ಪವಿತ್ರ, ಸಾಯಿ ಮೋನಿಕಾ, ಕೃಷಿ ವಿಜ್ಞಾನ ಕೇಂದ್ರಗಳ ಹಿರಿಯ ವಿಜ್ಞಾನಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.






