ರಾಯಚೂರು | 13ನೇ ಕೆಎಸ್‌ಆರ್‌ಪಿ ಬೆಟಾಲಿಯನ್ ಸ್ಥಾಪನೆಗೆ ಜನಪ್ರತಿನಿಧಿಗಳು ಧ್ವನಿ ಎತ್ತಲಿ : ಸಣ್ಣ ನರಸಿಂಹ ನಾಯಕ

ರಾಯಚೂರು : ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯನ್ನೊಳಗೊಂಡು 13ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಸ್ಥಾಪನೆ ಅಗತ್ಯವಿದ್ದು, ಅಗತ್ಯ ಭೂಮಿ ಸೇರಿದಂತೆ ಕೆಕೆಆರ್‌ಡಿಬಿಯಿಂದ ಅನುದಾನ ಒದಗಿಸಲು ಸಿದ್ದವಿದ್ದರೂ ಸರ್ಕಾರ ಮಾತ್ರ ಈ ಭಾಗವನ್ನು ನಿರ್ಲಕ್ಷ್ಯ ವಹಿಸುತ್ತಿದೆ. ಈ ಕುರಿತು ಈ ಭಾಗದ ಜನಪ್ರತಿನಿಧಿಗಳು ಧ್ವನಿ ಎತ್ತಲಿ ಎಂದು ಜೆಡಿಎಸ್ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಉಪಾಧ್ಯಕ್ಷ ಸಣ್ಣ ನರಸಿಂಹನ ನಾಯಕ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೆಎಸ್‌ಆರ್‌ಪಿ ಬೆಟಾಲಿಯನ್ ಸ್ಥಾಪನೆಗಾಗಿ ಸದನದಲ್ಲಿ ಶರಣಗೌಡ ಮಾತ್ರ ಧ್ವನಿ ಎತ್ತಿದ್ದಾರೆ, ಆದರೆ ಜಿಲ್ಲೆಯ ಯಾವೊಬ್ಬ ಶಾಸಕರು ಈ ಬಗ್ಗೆ ಮಾತನಾಡದೇ ಈ ಭಾಗದ ಕಾನೂನು ಸುವ್ಯವಸ್ಥೆ ಕಾಪಾಡಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 12ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಗುಲಬರ್ಗಾ ಜಿಲ್ಲೆಯಲ್ಲಿದೆ. ರಾಯಚೂರು ನಿಂದ 200 ಕಿ.ಮೀ ದೂರವಿದ್ದು, ಯಾವುದೇ ದೊಡ್ಡ ಕಾರ್ಯಕ್ರಮಗಳಿಗೆ ಬೇರೆ ಜಿಲ್ಲೆಗಳಿಂದ ಪೋಲಿಸರನ್ನು ಕರೆತರಬೇಕಾದ ಸ್ಥಿತಿ ಇದೆ, ಆದರೆ ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗೆ ಆಸಕ್ತಿ ಇಲ್ಲ, ಈ ಭಾಗದ ಅಭಿವೃದ್ಧಿ ಬೇಕಾಗಿಲ್ಲವೇ ಎಂದು ಪ್ರಶ್ನಿಸಿದರು.
13ನೇ ಬೆಟಾಲಿಯನ್ ಸ್ಥಾಪನೆಗೆ ಅಗತ್ಯ ಭೂಮಿ ಇದೆ. ಕೆಕೆಆರ್‌ಡಿಬಿಯಿಂದ ಅನುದಾನ ನೀಡಲು ಸಿದ್ಧರಿದ್ದಾರೆ, ಆದರೆ ಸರ್ಕಾರ ಮಾತ್ರ ಈ ಭಾಗಕ್ಕೆ ನೀಡಲು ಮಲತಾಯಿ ದೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ರಾಯಚೂರು ಮತ್ತು ಯಾದಗಿರಿ ಗಡಿ ಜಿಲ್ಲೆಯಾಗಿದ್ದು, 13ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಸ್ಥಾಪನೆ ಅಗತ್ಯವಿದೆ. ಈ ಬಗ್ಗೆ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ, ಉಪ ಮುಖ್ಯಮಂತ್ರಿಗೆ ಗೃಹ ಸಚಿವರಿಗೆ, ಸರ್ಕಾರದ ಅಪರ ಕಾರ್ಯದರ್ಶಿಗೆ, ಆರ್ಥಿಕ ಇಲಾಖೆ ಕಾರ್ಯದರ್ಶಿಗೆ, ಒಳಾಡಳಿತ ಅಪರ ಕಾರ್ಯದರ್ಶಿಗೆ, ಪೋಲಿಸ್ ಮಹಾ ನಿರ್ದೇಶಕರಿಗೆ, ಜಿಲ್ಲಾಧಿಕಾರಿಗೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ, ಮನವಿ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಸರ್ಕಾರಕ್ಕೆ ಮನವರಿಕೆಯಾಗುತ್ತಿಲ್ಲ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಎಲ್ಲಾ ಶಾಸಕರು ಒಕ್ಕೊರಲಿನ ಧ್ವನಿ ಎತ್ತಿದಾಗ ಮಾತ್ರ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆರ್ಥಿಕ ಇಲಾಖೆಯು ಈ ಬಗ್ಗೆ ಪರಿಶೀಲನೆ ಮಾಡಬೇಕು, ಪ್ರಸ್ತಾವನೆ ಯಾಕೆ ತಿರಸ್ಕರಿಸಲಾಗಿದೆ, ಮರು ಪ್ರಸ್ತಾವನೆಯಲ್ಲಿ ಜಿಲ್ಲಾಧಿಕಾರಿಗಳು ಸಲ್ಲಿಸಬೇಕು, ಆರ್ಥಿಕ ಇಲಾಖೆಗೆ ಇದನ್ನು ಮನಗಂಡು ಪ್ರಸ್ತಾವನೆಗೆ ಅನುಮೋದನೆ ನೀಡಬೇಕು ಎಂದರು.
ಕೂಡಲೇ 13ನೇ ಕೆಎಸ್‌ಆರ್‌ಪಿ ಬೆಟಾಲಿಯನ್ ಸ್ಥಾಪನೆಗೆ ಸರ್ಕಾರಕ್ಕೆ ಒತ್ತಾಯಿಸಬೇಕು ಇಲ್ಲದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಿರಂತರವಾಗಿ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಮರೇಶಗೌಡ, ಯಲ್ಲರೆಡ್ಡಿ, ಹಂಪಯ್ಯನಾಯಕ, ನಾಗರಾಜ ಗೌಡ, ಬಸವರಾಜ, ಜೇಮ್ಸ್ ಸೇರಿದಂತೆ ಇತರರು ಇದ್ದರು.







