ರಾಯಚೂರು | ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕು : ವೆಂಕಟೇಶ್

ರಾಯಚೂರು: ಸಾಮಾಜಿಕ ಪಿಡುಗಾಗಿ ಪರಿಣಮಿಸಿದ ಬಾಲ್ಯ ವಿವಾಹದಿಂದಾಗಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಸರ್ಕಾರದ ಜೊತೆ ಎಲ್ಲರೂ ಸೇರಿ ಜಾಗೃತಿ ಮೂಡಿಸಿದಾಗ ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಅವರು ತಿಳಿಸಿದರು.
ಡಿ.19ರ ಶುಕ್ರವಾರದಂದು ನಗರದ ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ಎಂ.ಆರ್.ಡಬ್ಲ್ಯೂ ಮತ್ತು ವಿ.ಆರ್.ಡಬ್ಲ್ಯೂಗಳಿಗೆ ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹದಿಂದ ಮಕ್ಕಳ ಶಿಕ್ಷಣ ಮೊಟಕಾಗುತ್ತದಲ್ಲದೆ ಅವರ ಭವಿಷ್ಯ ನಾಶವಾಗಲಿದೆ. ಮಕ್ಕಳ ಮೇಲೆ ಅನೇಕ ರೀತಿಯಲ್ಲಿ ದುಷ್ಪರಿಣಾಮ ಉಂಟು ಮಾಡುವ ಈ ಕೆಟ್ಟ ಪದ್ಧತಿ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರು ಮಾತನಾಡಿ, ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಇಂದು ಅಗತ್ಯವಾಗಿದೆ. ಎಲ್ಲಾ ಇಲಾಖೆಗಳ ಎಲ್ಲಾ ಹಂತದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಈ ಬಗ್ಗೆ ಅರಿಯಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಮರೇಶ್ ಹಾವಿನ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೊಸಗಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಅವರು ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶರಣಮ್ಮ ಕಾರನೂರು, ಮಾಣಿಕ ಪ್ರಭು ಅಂಧಮಕ್ಕಳ ಶಾಲೆಯ ಮುಖ್ಯ ಗುರುಗಳಾದ ಆರ್.ಎಂ.ಯತ್ನಳ್ಳಿ, ರಕ್ಷಣಾಧಿಕಾರಿ ಹನುಮೇಶ, ಮಕ್ಕಳ ಸಹಾಯವಾಣಿ ಸಂಯೋಜಕ ಮೋಹನ್ ಕುಮಾರ್, ರಮೇಶ್ ಅವರು ಇದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ತಿಕ್ಕಯ್ಯ ಅವರು ನಿರೂಪಿಸಿದರು. ರಕ್ಷಣಾಧಿಕಾರಿ ಅಸಾಂಸ್ಥಿಕ ಕಿರಿಲಿಂಗಪ್ಪ ಅವರು ಸ್ವಾಗತಿಸಿದರು. ಕಾನೂನು ಪರಿವೀಕ್ಷಣಾಧಿಕಾರಿ ಶಿವರಾಜ್ ಪಾಟೀಲ್ ಅವರು ವಂದಿಸಿದರು ಹಾಗೂ ಇತರ ಸಿಬ್ಬಂದಿ ಹಾಜರಿದ್ದರು.







