ರಾಯಚೂರು | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಆನ್ ಲೈನ್ ತಂತ್ರಾಂಶದಲ್ಲಿ ಅವಧಿ ವಿಸ್ತರಣೆ

ಸಾಂದರ್ಭಿಕ ಚಿತ್ರ
ರಾಯಚೂರು : ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅಪೂರ್ಣ ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಜಿ ಪೂರ್ಣಗೊಳಿಸಲು ಆನ್ ಲೈನ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲು ಅವಧಿ ವಿಸ್ತರಿಸಿದೆ ಎಂದು ದೇವದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಧವನಂದ ಅವರು ತಿಳಿಸಿದ್ದಾರೆ.
ದೇವದುರ್ಗ ತಾಲ್ಲೂಕಿನ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತ್ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ ಒಟ್ಟು 57 ಅಂಗನವಾಡಿ ಕಾರ್ಯಕರ್ತೆ ಹಾಗೂ 84 ಅಂಗನವಾಡಿ ಸಹಾಯಕಿಯರ ಗೌರವಸೇವೆ ಹುದ್ದೆಗಳಿಗೆ ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಆನ್ ಲೈನ್ ತಂತ್ರಾಂಶದಲ್ಲಿ ನಿಗದಿತ ಆರ್ಜಿ ನಮೂನೆಯಲ್ಲಿ ಮಾಹಿತಿ ತುಂಬುವುದು, ತಮ್ಮ ಭಾವಚಿತ್ರ, ಸಹಿಯನ್ನು ಅಪ್ ಲೋಡ್ ಮಾಡುವುದು, ತಮ್ಮ ದಾಖಲಾತಿಗಳನ್ನು ಅಪ್ ಲೋಡ್ ಮಾಡುವುದು, ತಮ್ಮ ಆಧಾರ ಸಂಖ್ಯೆ ನಮೂದಿಸಿ ಇ-ಹಸ್ತಾಕ್ಷರದೊಂದಿಗೆಅರ್ಜಿ ಪೂರ್ಣಗೊಳಿಸಬೇಕಾಗಿರುತ್ತದೆ.
ಕೆಲವರಿಗೆ 1ನೇ ಹಂತದಲ್ಲಿಯೇ ಅರ್ಜಿ Successes Full ಎಂಬ ಮೆಸೇಜ್ ಅವರುಗಳ ಮೊಬೈಲ್ ಗಳಿಗೆ ಸ್ವೀಕೃತವಾಗಿರುವುದರಿಂದ ಅಭ್ಯರ್ಥಿಗಳು ಅರ್ಜಿಯ ನಾಲ್ಕು ಹಂತಗಳನ್ನು ಪೂರ್ಣಗೊಳಿಸಿರುವುದಿಲ್ಲ, ತಾಲ್ಲೂಕಿನಲ್ಲಿ ಅಂತಹ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ 569 ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ 181 ಒಟ್ಟು 750 ಅಪೂರ್ಣ ಅರ್ಜಿಗಳು ಇರುತ್ತವೆ ಅಂತಹ ಅರ್ಜಿಗಳನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಹಾಗಾಗಿ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಪೂರ್ಣಗೊಳಿಸಲು ಡಿ.26 ರಿಂದ 2025ರ ಜನವರಿ.5ರ ಒಳಗೆ ಆನ್ ಲೈನ್ ಅಲ್ಲಿ, ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ.
ನಿಗದಿ ಪಡಿಸಿದ ಅವಧಿಯೊಳಗೆ ಅಪೂರ್ಣ ಅರ್ಜಿಗಳನ್ನು ಆನ್ ಲೈನ್ ವೆಬ್ ಸೈಟ್ https://karnemakaone.kar.nic.in/abcd/ ಮುಖಾಂತರ ಪೂರ್ಣಗೊಳಿಸಲು ಕ್ರಮವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಡಾ.ಅರಷಿಣಿಗಿ ಬಿಲ್ಡಿಂಗ್ ನಗರಗುಂಡ ರೋಡ್ ಇಲ್ಲಿಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆಂದು ದೇವದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಧವನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







