ರಾಯಚೂರು | ತಹಶೀಲ್ದಾರ್ ಅವರ ನಕಲಿ ಸಹಿ ಹಾಕಿ ವಿವಿಧ ಪ್ರಮಾಣ ಪತ್ರ ಸೃಷ್ಟಿ : ಇಬ್ಬರ ವಿರುದ್ಧ ಪ್ರಕರಣ ದಾಖಲು

ರಾಯಚೂರು : ತಹಶೀಲ್ದಾರ್ ಅವರ ನಕಲಿ ಸಹಿ ಹಾಕಿ ವಿವಿಧ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ ಇಬ್ಬರು ಆರೋಪಿಗಳ ವಿರುದ್ಧ ಲಿಂಗಸೂಗೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಲಿಂಗರಾಜ ಮೇದಿನಾಪುರ ಹಾಗೂ ಕಂಪ್ಯೂಟರ್ ಆಪರೇಟರ್ ಶರಣು ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ. ಮಹಾಲಿಂಗರಾಜ ಮೇದಿನಾಪುರ ತಮ್ಮ ಜಮೀನಿನ ಮೇಲೆ ಬ್ಯಾಂಕ್ ಸಾಲ ಪಡೆಯುವ ಉದ್ದೇಶದಿಂದ ಬೇಬಾಕಿ ಪ್ರಮಾಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ ಹಾಗೂ ಗೇಣಿ ರಹಿತ ಪ್ರಮಾಣ ಪತ್ರಗಳನ್ನು ಪಡೆಯಲು ಶರಣು ಅವರ ಸಹಾಯದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪ ಕೇಳಿ ಬಂದಿದೆ.
ಶರಣು ಅವರು ತಹಶೀಲ್ದಾರ್ ಅವರ ನಕಲಿ ಸಹಿ ಬಳಸಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಸರಕಾರವನ್ನು ವಂಚಿಸಿದ್ದಾರೆ ಎಂದು ಗ್ರೇಡ್-2 ತಹಶೀಲ್ದಾರ್ ಬಸವರಾಜ ಝಳಕಿಮಠ ನೀಡಿದ ದೂರಿನ್ವಯ ಪಿಎಸ್‌ಐ ರಾಘವೇಂದ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Next Story





