Raichur | ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬರ ಅಧ್ಯಯನ; ಕೇಂದ್ರದ ತಂಡದ ವಿರುದ್ಧ ರೈತರ ಅಸಮಾಧಾನ

ರಾಯಚೂರು: ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು ರೈತರು ಸಂಕಷ್ಟಕ್ಕೆ ಸಿಲುಕಿರುವ ಮಧ್ಯೆ ರವಿವಾರ ಆಗಮಿಸಿದ ಕೇಂದ್ರದ ಬರ ಅಧ್ಯಯನ ತಂಡ ಒಂದೇ ದಿನ 4 ತಾಲೂಕುಗಳಲ್ಲಿ ಅಧ್ಯಯನ ನಡೆಸಿದ್ದಾರೆ. ಮಸ್ಕಿ ತಾಲೂಕಿನಲ್ಲಿ ರಾತ್ರಿ ವೇಳೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬರ ಅಧ್ಯಯನ ನಡೆಸಿದ್ದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ದೇವದುರ್ಗ, ಲಿಂಗಸೂಗೂರು ಹಾಗೂ ಮಸ್ಕಿ ತಾಲೂಕುಗಳಲ್ಲಿ ಕೇಂದ್ರದ ಬರ ಅಧ್ಯಯನ ತಂಡವು ವಿವಿಧ ಬೆಳೆಗಳ ಪರಿಸ್ಥಿತಿಯನ್ನು ಪರಿಶೀಲಿಸಿತು. ದೇವದುರ್ಗ ತಾಲೂಕು ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯಲ್ಲಿ ಮಳೆ ಕೊರತೆ, ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.
ನಂತರ ತಂಡವು ಮೆಣಸಿನಕಾಯಿ, ಹತ್ತಿ ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಸ್ಕಿ ತಾಲೂಕಿನ ಅಮೀನಗಢ ಗ್ರಾಮದಲ್ಲಿಯೂ ತೊಗರಿ ಬೆಳೆ ವೀಕ್ಷಿಸಿ ರೈತರಿಂದ ನೇರವಾಗಿ ಮಾಹಿತಿ ಪಡೆಯಿತು.
ಮಳೆ ಕೊರತೆಯಿಂದ ಈರುಳ್ಳಿ, ಹತ್ತಿ ಹಾಗೂ ತೊಗರಿ ಬೆಳೆಗಳಿಗೆ ಹಾನಿಯಾಗಿದ್ದು, ಇಳುವರಿ ಕುಸಿದಿರುವ ಬಗ್ಗೆ ರೈತರು ಕೇಂದ್ರ ತಂಡಕ್ಕೆ ವಿವರಿಸಿದರು. ಕೆಲವು ಜಮೀನುಗಳಲ್ಲಿ ರಾತ್ರಿ ಸಮಯವಾದರೂ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬೆಳೆಗಳನ್ನು ಪರಿಶೀಲಿಸಿದ ತಂಡ, ರೈತರ ಸಮಸ್ಯೆಗಳನ್ನು ಆಲಿಸಿತು.
ರಾತ್ರಿಯಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿವಿಧೆಡೆ ಬೆಳೆ ವೀಕ್ಷಣೆ ನಡೆಸಿದ ಕೇಂದ್ರ ಬರ ಅಧ್ಯಯನ ತಂಡವು ಬರ ಪರಿಸ್ಥಿತಿಯ ವಾಸ್ತವಾಂಶವನ್ನು ದಾಖಲಿಸಿಕೊಂಡಿತು.
ರಾತ್ರಿ ವೇಳೆ ಬೆಳೆಗಳಿಗೆ ಭೇಟಿ ನೀಡಿದರೆ ಹೇಗೆ ಪರಿಸ್ಥಿತಿ ಅರ್ಥವಾಗುತ್ತೆ, ಬೆಳೆಯ ತೇವಾಂಶ, ಬೆಳೆಯ ವಾಸ್ತವ ಸ್ಥಿತಿ ಹೇಗೆ ತಿಳಿಯಲಿದೆ. ಕೇವಲ ಅಧಿಕಾರಿಗಳ ಮಾಹಿತಿ ಆಧಾರದ ಮೇಲೆಯೇ ವರದಿ ನೀಡುವುದಾದರೆ ಜಿಲ್ಲೆಗೆ ಭೇಟಿ ನೀಡಿದ್ದು ಯಾಕಾಗಿ?, ಒಂದೇ ದಿನದಲ್ಲಿ ತರಾತುರಿಯಲ್ಲಿ ಅಧ್ಯಯನ ಮಾಡಲು ಸಾಧ್ಯವೇ ಎಂದು ರೈತರು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಡಾ. ಮಾನಸಿಂಗ್ ಅವರ ನೇತೃತ್ವದ ತಂಡ ದೇವದುರ್ಗ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ವೀಕ್ಷಿಸಿತ್ತು. ಬಳಿಕ ದೇವದುರ್ಗದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬರದಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ಪಡೆದುಕೊಂಡಿತ್ತು.
ಭಾರತ ಸರ್ಕಾರದ ವೆಚ್ಚ ಇಲಾಖೆಯ ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ತಂಡದಲ್ಲಿದ್ದರು.
ಜಿಲ್ಲೆಯಲ್ಲಿ ಆಗಿರುವ ಮಳೆಯ ಪ್ರಮಾಣ, ಮಳೆ ಕೊರತೆಯಿಂದ ಬೆಳೆಗಳಿಗೆ ಉಂಟಾಗಿರುವ ಹಾನಿ, ತೋಟಗಾರಿಕೆ ಬೆಳೆಗಳ ಸ್ಥಿತಿ ಹಾಗೂ ಜಾನುವಾರುಗಳಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ಕೃಷಿ, ತೋಟಗಾರಿಕೆ ಮತ್ತು ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಕೇಂದ್ರ ತಂಡ ಮಾಹಿತಿ ಸಂಗ್ರಹಿಸಿತ್ತು.
ರಾತ್ರಿ ವೇಳೆ ಬೆಳೆ ಅಧ್ಯಯನ ಮಾಡಿದರೆ ಏನು ತಿಳಿಯಲ್ಲ, ಇದು ಕಾಟಾಚಾರದ ಭೇಟಿಯಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿಯೇ ವರದಿ ಕಳಿಸುತ್ತಾರೆ ಕೇವಲ ಅಧ್ಯಯನ ಮಾಡಿದರೆ ಸಾಲದು ಶೀಘ್ರವೇ ಪರಿಹಾರ ನೀಡಲಿ.
- ಬಸವರಾಜ ಗುಡಿಹಾಳ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ






