ʼರಾಯಚೂರು ಉತ್ಸವ-2026ʼ : ವಿಶೇಷ ವೆಬ್‌ಸೈಟ್ ಲೋಕಾರ್ಪಣೆ

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 5ರಿಂದ 7ರವರೆಗೆ ನಡೆಯಲಿರುವ ʼಎಡೆದೊರೆ ನಾಡು –ರಾಯಚೂರು ಜಿಲ್ಲಾ ಉತ್ಸವ–2026ʼರ ಪ್ರಚಾರಾರ್ಥ ಸಿದ್ಧಪಡಿಸಿದ ವಿಶೇಷ ವೆಬ್‌ತಾಣವನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಅವರು ಜ.21ರಂದು ಲೋಕಾರ್ಪಣೆ ಮಾಡಿದರು.
ಉತ್ಸವದ ಪ್ರಚಾರ ಸಮಿತಿಯು ಸಿದ್ಧಪಡಿಸಿರುವ ಈ ವೆಬ್‌ತಾಣದಲ್ಲಿ ಉತ್ಸವದ ಎಲ್ಲ ಕಾರ್ಯಕ್ರಮಗಳ ಸಂಕ್ಷಿಪ್ತ ಮಾಹಿತಿ, ಛಾಯಾಚಿತ್ರಗಳು, ಪೋಸ್ಟರ್‌ಗಳು, ವಿಶೇಷ ವಿಡಿಯೋಗಳು ಹಾಗೂ ಪ್ರತಿ ದಿನ ನಡೆಯುವ ವಿವಿಧ ಚಟುವಟಿಕೆಗಳ ಸಂಪೂರ್ಣ ವಿವರಗಳು ಲಭ್ಯವಿವೆ. ಸಾರ್ವಜನಿಕರು www.raichurutsava.com ಲಿಂಕ್ ಮೂಲಕ ವೆಬ್‌ತಾಣಕ್ಕೆ ಭೇಟಿ ನೀಡಿ ಉತ್ಸವದ ಮಾಹಿತಿಯನ್ನು ಪಡೆದುಕೊಳ್ಳಬಹುದು.
ನಮ್ಮ ಜಿಲ್ಲೆಯಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳು ಹಾಗೂ ವಿಶ್ವದ ಯಾವುದೇ ಮೂಲೆಯಲ್ಲಿರುವ ಜನರು ಈ ವೆಬ್‌ತಾಣದ ಮೂಲಕ ಉತ್ಸವದ ಮಾಹಿತಿ ಪಡೆದು ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ವೆಬ್‌ಸೈಟ್ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಸಚಿವರಿಗೆ ಮಾಹಿತಿ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದೂ, ಅಪರ ಜಿಲ್ಲಾಧಿಕಾರಿ ಶಿವಾನಂದ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪವನ್ ಕೀಶೋರ್ ಪಾಟೀಲ, ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್, ರೈತ ಸಂಘದ ಅಧ್ಯಕ್ಷ ಚಾಮರಸ ಪಾಟೀಲ, ರಾಜ್ಯ ನೀತಿ ಆಯೋಗದ ಸದಸ್ಯ ಡಾ. ರಝಾಕ್ ಉಸ್ತಾದ್, ಮಹಾನಗರ ಪಾಲಿಕೆ ಸಮಿತಿಯ ಕಾರ್ಯದರ್ಶಿ ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಸಂತೋಷ ರಾಣಿ, ವಾರ್ತಾ ಇಲಾಖೆ ಅಧಿಕಾರಿ ಗವಿಸಿದ್ದಪ್ಪ ಹೊಸಮನಿ, ತಹಸೀಲ್ದಾರ್ ಸುರೇಶ್ ವರ್ಮಾ, ಅಮರೇಶ್ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







