ರಾಯಚೂರು | ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಹೊಡೆದಾಟ

ರಾಯಚೂರು : ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಹೋದ ಪಿಎಸ್‌ಐ ಕಣ್ಣಿಗೆ ಖಾರದಪುಡಿ ಎರಚಿದ ಘಟನೆ ರಾಯಚೂರು ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ನಗರದ ವಾರ್ಡ್ ನಂ.22 ರ ಗದ್ವಾಲ್ ರಸ್ತೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುವಾಗ ವೈಯಕ್ತಿಕ ಕಾರಣಕ್ಕಾಗಿ ಬಿಜೆಪಿ ಮುಖಂಡ ಯು.ನರಸರೆಡ್ಡಿ ಮತ್ತು ಡ್ಯಾಡಿ ವೀರೇಶ ಅವರ ಎರಡು ಗುಂಪುಗಳ ನಡುವೆ ಜಗಳ ಉಂಟಾಗಿ ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಬಂದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್‌ಐ ಅವರ ಕಣ್ಣಿಗೆ ದುಷ್ಕರ್ಮಿಗಳು ಕಾರದ ಪುಡಿ ಎರಚಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪರಿಸ್ಥಿತಿ ನಿಭಾಯಿಸಲು ಪೋಲಿಸರು ಜನರನ್ನು ಚದುರಿಸಲು ಲಘು ಲಾಠಿ ಚಾರ್ಜ್ ಮಾಡಿದ್ದು, ಬಳಿಕ ಡಿಜೆ ಸೆಟ್ ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಲಾಟೆಯ ವೇಳೆ 4 ಜನರು ಗಾಯಗೊಂಡಿದ್ದು, ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ವೈಯಕ್ತಿಕ ವಿಚಾರಕ್ಕೆ ಇಂದು ಬೆಳಗ್ಗೆಯೂ ಸಹ ಎರಡು ಗುಂಪಿನ ಮಧ್ಯ ಮಾತಿನ ಚಕಮಕಿ ಉಂಟಾಗಿದ್ದು, ಪೋಲಿಸರು ಪರಿಸ್ಥಿತಿ ನಿಭಾಯಿಸಿದ್ದಾರೆ.
ಗಲಾಟೆಯ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.







