Raichuru | ಚರ್ಚ್, ದೇವಸ್ಥಾನದ ವಿಚಾರವಾಗಿ ಜಗಳ: 15 ಮಂದಿಗೆ ಗಾಯ, 20 ಮಂದಿ ವಿರುದ್ಧ ಎಫ್ ಐಆರ್

ರಾಯಚೂರು: ದೇವಸ್ಥಾನ ಹಾಗೂ ಚರ್ಚ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಸುಮಾರು 15 ಮಂದಿ ಗಾಯಗೊಂಡ ಘಟನೆ ರಾಯಚೂರು ತಾಲೂಕಿನ ಗಿಲ್ಲೆಸುಗೂರು ಕ್ಯಾಂಪ್ ನಲ್ಲಿ ನಡೆದಿದೆ. ಈ ಸಂಬಂಧ 20 ಮಂದಿಯ ವಿರುದ್ಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಪುನರ್ವಸತಿ ಸ್ಥಳದಲ್ಲಿ ನಿರ್ಮಿಸಲಾಗಿರುವ ಚರ್ಚ್ ಮತ್ತು ಆಂಜನೇಯ ದೇವಸ್ಥಾನದ ವಿಚಾರವಾಗಿ ಕಳೆದ ಎರಡು ತಿಂಗಳಿಂದ ವಿವಾದ ನಡೆಯುತ್ತಿದೆ. ಈ ಹಿಂದೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ಸಂಧಾನ ನಡೆಸಲಾಗಿತ್ತು. ಆದರೂ ಮಂಗಳವಾರ ಅಪರಾಹ್ನ 2 ಗಂಟೆ ಸುಮಾರಿಗೆ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ.
ಎರಡು ಗುಂಪುಗಳ ನಡುವೆ ಆರಂಭಗೊಂಡ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿವೆ. ಕಲ್ಲು ತೂರಾಟದಿಂದ ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ರಾಯಚೂರಿನ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಇಡಪನೂರು ಠಾಣೆಯ ಪೊಲೀಸರು ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಚ್ಚಾಲಿ ಗ್ರಾಮ ಹಾಗೂ ಬಿಚ್ಚಾಲಿ ಕ್ಯಾಂಪ್ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಏಳು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.






