Raichur | ಪೂಜಾ ಸಾಮಗ್ರಿಗಳ ಅಂಗಡಿಗೆ ಬೆಂಕಿ; ಅಪಾರ ನಷ್ಟ

ರಾಯಚೂರು: ನಗರದ ಭಂಗಿಕುಂಟಾ ರಸ್ತೆ ಬದಿಯಲ್ಲಿರುವ ಪೂಜಾ ಸಾಮಗ್ರಿಗಳ ಅಂಗಡಿಯಲ್ಲಿ ಶನಿವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಂಗಡಿ ಸಂಪೂರ್ಣ ಹೊತ್ತಿ ಉರಿದ ಘಟನೆ ನಡೆದಿದೆ.
ಬೆಳಿಗ್ಗೆ ಸುಮಾರು 7.30ರ ವೇಳೆಗೆ ಟೀನ್ ಶೆಡ್‌ನಿಂದ ನಿರ್ಮಿಸಿದ್ದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿ ದಟ್ಟ ಹೊಗೆ ಆವರಿಸಿತು. ಹೊಗೆ ಸಮೀಪದ ಅಪಾರ್ಟ್‌ಮೆಂಟ್‌ಗಳೊಳಗೂ ಹರಡಿದ್ದರಿಂದ ಸ್ಥಳೀಯರು ಆತಂಕಕ್ಕೊಳಗಾದರು.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ಅಂಗಡಿ ತಾಯಣ್ಣ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಬೆಂಕಿಯಿಂದ ಉಂಟಾದ ನಷ್ಟದ ಪ್ರಮಾಣ ಹಾಗೂ ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಘಟನೆ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Next Story




