ರಾಯಚೂರು | ಹಳೆಯ ಡಿಡಿಪಿಐ ಕಚೇರಿಯಲ್ಲಿ ಬೆಂಕಿ ಅವಘಡ: ಹಳೆಯ ದಾಖಲೆಗಳು ಸುಟ್ಟು ಭಸ್ಮ

ರಾಯಚೂರು : ನಗರದ ಹಳೆಯ ಡಿಡಿಪಿಐ ಕಚೇರಿಯಲ್ಲಿ ಇಂದು ಬೆಳಿಗ್ಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಅನೇಕ ವರ್ಷಗಳ ಹಳೆಯ ದಾಖಲೆಗಳು ಸುಟ್ಟು ಭಸ್ಮವಾಗಿವೆ.
ಸುಮಾರು 10×10 ಅಡಿ ಗಾತ್ರದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಾಖಲೆಗಳು ನಾಶವಾದ ಹೊರತಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಳೆಯ ಡಿಡಿಪಿಐ ಕಚೇರಿ ಶಿಥಿಲಾವಸ್ಥೆಯಲ್ಲಿರುವ ಕಾರಣದಿಂದ ಆಝಾದ್ ನಗರದಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಕಚೇರಿ ಕಾರ್ಯಾಚರಣೆ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಯಕ್ಲಾಸಪುರದ ಹೊಸ ಜಿಲ್ಲಾಡಳಿತ ಭವನಕ್ಕೆ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.
ಇದು ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಘಟನೆ ಅಲ್ಲ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ದಾಖಲೆಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನುವ ಅನುಮಾನವಿದೆ. ಈ ಬಗ್ಗೆ ಕೆಲವು ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ತನಿಖೆ ಮುಂದುವರೆಯಲಿದೆ ಎಂದು ಡಿಡಿಪಿಐ ಕಾಳಪ್ಪ ಬಡಿಗೇರ್ ತಿಳಿಸಿದ್ದಾರೆ.





