ರಾಯಚೂರು | ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದ್ದ ಮಂಗನ ಸೆರೆ ಹಿಡಿದ ಅರಣ್ಯಾಧಿಕಾರಿಗಳು

ರಾಯಚೂರು: ಲಿಂಗಸುಗೂರು ತಾಲೂಕಿನ ಗುರುಗುಂಟಾ ಹೋಬಳಿಯ ಪೈದೊಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಟಣಮಕಲ್ ಗ್ರಾಮದಲ್ಲಿ ಮಂಗಗಳ ದಾಳಿಯಿಂದ ಮೂರ್ನಾಲ್ಕು ಜನ ಗಾಯಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರ ಸಹಾಯದಿಂದ ಮಂಗವನ್ನು ಸೆರೆ ಹಿಡಿದರು.
ಹಲವು ದಿನಗಳಿಂದ ಟಣಮಕಲ್ ಗ್ರಾಮದಲ್ಲಿ ಮಂಗಗಳು ಕಾಟ ಹೆಚ್ಚಾಗಿದ್ದು, ಸ್ಥಳೀಯ 5 ಜನ ಮಹಿಳೆಯರ ಮೇಲೆ ಮಂಗ ದಾಳಿ ಮಾಡಿದ್ದು, ಓರ್ವ ಮಹಿಳೆಗೆ ಹೆಚ್ಚಿನ ಪ್ರಮಾಣದಲ್ಲಿ ಗಾಯವಾಗಿ, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೈದೊಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಟಣಮಕಲ್ ಗ್ರಾಮದಲ್ಲಿ ಮಹಿಳೆಯರ ಮೇಲೆ ಮಂಗ ದಾಳಿ ಮಾಡಿರುವ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವರೆಡ್ಡಿ ಗೌಡೂರವರು ಗಮನಕ್ಕೆ ಬಂದ ತಕ್ಷಣ ಟಣಮಕಲ್‌ನಲ್ಲಿ ಮಂಗ ದಾಳಿ ಕುರಿತು ಅರಣ್ಯ ಅಧಿಕಾರಿಗಳಿಗೆ ತಿಳಿಸಿ ಗ್ರಾಮ ಪಂಚಾಯತಿಯಿಂದ ಮಂಗ ಸೆರೆ ಹಿಡಿಯಲು 7 ಸಾವಿರ ರೂ. ಧನ ಸಹಾಯ ಮಾಡಿದರು.
ಎರಡು ದಿನಗಳಿಂದ ಪತ್ರಿಕೆಗಳಲ್ಲಿ ನಿರಂತರ ಸುದ್ದಿ ಪ್ರಕಟಿಸಿದ ಪರಿಣಾಮ ಇಂದು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಒಂದು ಮಂಗವನ್ನು ಸೆರೆಹಿಡಿದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಈ ವೇಳೆ ಅರಣ್ಯ ಸಿಬ್ಬಂದಿಗಳಾದ ಓಬಳಪ್ಪ, ದಿವ್ಯಾ, ಪರಶುರಾಮ, ಶರಣಬಸವ ಗುರಗುಂಟಾ, ಗ್ರಾಮಸ್ಥರಾದ ಹನುಮಂತ ಟಣಮಕಲ್, ಹನುಮಂತ ಜಮದಾರ, ದುರಗಣ್ಣ ಕರಿಗುಡ್ಡ, ಸೋಮಣ್ಣ ಟಣಮಕಲ್, ರಾಯಪ್ಪ ಗ್ರಾ.ಪಂ.ಸದಸ್ಯ, ರಾಮಪ್ಪ ಗ್ರಾ.ಪಂ.ಸದಸ್ಯ, ದೊಡಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.







