ರಾಯಚೂರು | ಏಮ್ಸ್ ಮಂಜೂರಾತಿಗೆ ಸಚಿವ ಸಂಪುಟ ರಚಿಸಿ: ಬಸವರಾಜ ಕಳಸ

ರಾಯಚೂರು : ರಾಯಚೂರು ಜಿಲ್ಲೆಗೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ಮಂಗಳವಾರ ನಾಲ್ಕನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ ಎಂದು ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಬಸವರಾಜ ಕಳಸ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೊಷ್ಠಿ ಯಲ್ಲಿ ಮಾತನಾಡಿದ ಅವರು, ರಾಯಚೂರಿಗೆ ಏಮ್ಸ್ ನೀಡುವಂತೆ ಈಗಾಗಲೇ ಮೂರುವರ್ಷದಿಂದ ಸುದಿರ್ಘ ಹೋರಾಟ ನಡೆಸಲಾಗಿದೆ. ಇನ್ನೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಕೂಡಲೇ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ನೇತೃತ್ವದಲ್ಲಿ ಶೀಘ್ರ ವಿಶೇಷ ಸಚಿವ ಸಂಪುಟದಲ್ಲಿ ಪ್ರತ್ಯೇಕ ಏಮ್ಸ್ ಮಂಜೂರಾತಿಗಾಗಿ ಸರ್ವಪಕ್ಷಗಳ ಸಭೆ ನಡೆಸಿ, ನಿಯೋಗ ತಂಡವನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.
ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಐಐಟಿಯಿಂದ ವಂಚಿತಗೊಂಡ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಬೇಕು. ಕೇಂದ್ರ ಸರ್ಕಾರ ನಮ್ಮ ಸಹನೆ ಪರೀಕ್ಷಿಸುವುದನ್ನು ಬಿಟ್ಟು ಹೋರಾಟವನ್ನು ಗೌರವಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕಕುಮಾರ ಜೈನ್, ವೀರಭದ್ರಯ್ಯ ಸ್ವಾಮಿ, ಗುರುರಾಜ ಕುಲಕರ್ಣಿ, ಜಗದೀಶ ಪೂರತಿಪ್ಪಲಿ, ಜಾನ್ ವೇಸ್ಲಿ ಉಪಸ್ಥಿತರಿದ್ದರು.





