ರಾಯಚೂರು: ಮಾಜಿ ದೇವದಾಸಿಯರಿಗೆ ಉಚಿತ ಮನೆ ನಿರ್ಮಿಸಲು ಅನಿರ್ಧಿಷ್ಠಾವಧಿ ಧರಣಿ

ರಾಯಚೂರು: ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಮನೆಗಳ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸುವುದು, ಫಲಾನುಭವಿಗಳಿಂದ ವಸೂಲಿ ಮಾಡಲಾಗುತ್ತಿರುವ ರೂ.1 ಲಕ್ಷ ವಂತಿಗೆ ಹಣವನ್ನು ಕೈಬಿಟ್ಟು ಸರ್ಕಾರವೇ ಉಚಿತವಾಗಿ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ನೇತೃತ್ವದಲ್ಲಿ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಬುಧವಾರ ಧರಣಿ ಆರಂಭಿಸಿದ್ದಾರೆ.
ದೇವದಾಸಿ ವಿಮುಕ್ತ ಸಂಘಟನೆಯಿಂದ ನಿರಂತರ ಹೋರಾಟದ ಫಲವಾಗಿ ನಗರದ ಆಶಾಪುರ ರಸ್ತೆಯ ಕೇಂದ್ರಿಯ ವಿದ್ಯಾಲಯದ ಹಿಂಭಾಗದಲ್ಲಿರುವ ಸರ್ವೆ ನಂ.1403ರಲ್ಲಿ 206 ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿಗಾಗಿ 5 ಎಕರೆ ಜಮೀನು ಮಂಜೂರಾಗಿತ್ತು. 2019ರಲ್ಲಿ ಮನೆಗಳ ನಿರ್ಮಾಣ ಕಾರ್ಯ ಆರಂಭವಾದರೂ, ಏಳು ವರ್ಷಗಳಾದರೂ ಕೇವಲ 84 ಮನೆಗಳು ಮಾತ್ರ ಅಂತಿಮ ಹಂತ ತಲುಪಿದ್ದು, ಉಳಿದ 122 ಮನೆಗಳ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮನೆಗಳ ನಿರ್ಮಾಣ ವಿಳಂಬದಿಂದ ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಬದುಕುತ್ತಿದ್ದು, ಕೆಲವು ಫಲಾನುಭವಿಗಳು ಮನೆ ಸಿಗುವ ಮುನ್ನವೇ ಮೃತಪಟ್ಟಿರುವುದು ವಿಷಾದನೀಯ. ಫಲಾನುಭವಿಗಳಿಂದ ವಸೂಲಿ ಮಾಡಲಾಗುತ್ತಿರುವ 1 ಲಕ್ಷ ರೂ. ವಂತಿಗೆ ಹಣವನ್ನು ರದ್ದುಪಡಿಸಿ ಸರ್ಕಾರವೇ ಉಚಿತ ಪುನರ್ವಸತಿ ಕಲ್ಪಿಸಬೇಕು. ಸರ್ವೆ ನಂ.1403ರಲ್ಲಿ ನಡೆಯುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಲ್ಲ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.
ದೇವದಾಸಿ ಮಹಿಳೆಯರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸಬೇಕು. ಮಾಜಿ ದೇವದಾಸಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ ಸಹಾಯಧನವನ್ನು 2,000ರಿಂದ 6,000ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ದೇವದಾಸಿ ಕುಟುಂಬಗಳ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿ ಕುಟುಂಬಕ್ಕೆ 5 ಎಕರೆ ಸಾಗುವಳಿಗೆ ಯೋಗ್ಯ ಭೂಮಿ ನೀಡಬೇಕು ಹಾಗೂ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ಸಹಾಯಧನದೊಂದಿಗೆ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಬೇಕು. ಬೇಡಿಕೆಗಳು ಈಡೇರುವವರೆಗೆ ಅಹೋರಾತ್ರಿ ಅನಿರ್ದಿಷ್ಟ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ, ಗೌರವಾಧ್ಯಕ್ಷ ಕೆ.ಜಿ.ವಿರೇಶ, ಮಹಾದೇವಿ, ಜಮಲಮ್ಮ, ಸಂತೋಷಮ್ಮ ಸರೋಜಮ್ಮ, ತಿಪ್ಪಮ್ಮ, ಜಮಲಮ್ಮ, ನಾಗಮ್ಮ, ನರಸಮ್ಮ, ಬಡೆಮ್ಮ, ಲಾಕಮ್ಮ, ಆನಂದ, ಹುಲಿಗೆಪ್ಪ, ರವಿ, ಬಸಂತಿ, ಭೀಮೇಶ ಸೇರಿದಂತೆ ಮಾಜಿ ದೇವದಾಸಿ ಮಹಿಳೆಯರು ಭಾಗವಹಿಸಿದರು.






